ಉಡುಪಿ : ಹಣದ ಆಸೆಗಾಗಿ ತನ್ನದೇ ರೂಮ್ಮೇಟ್ ಹಾಗೂ ಗೆಳತಿಯ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿ, ಚಿನ್ನಾಭರಣ ಸುಲಿಗೆ ಮಾಡಿದ್ದ ಯುವತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಪಕ್ಕದ ರೂಮಿನಲ್ಲೇ ಇದ್ದುಕೊಂಡು ತಾನೇನೂ ಅರಿಯದವಳಂತೆ ನಾಟಕವಾಡುತ್ತಿದ್ದ ಸುಷ್ಮಾ ಎಂಬಾಕೆಯೇ ಈ ಭೀಕರ ಕೃತ್ಯವೆಸಗಿದ ಖತರ್ನಾಕ್ ಆರೋಪಿ.
ಉಡುಪಿಯ ಮಣಿಪಾಲದ ಶಾಂತಿನಗರದ ಬಾಡಿಗೆ ಮನೆಯೊಂದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಮೂಲದ ಯೋಗೀತಾ (23) ಎಂಬ ಯುವತಿ ತನ್ನ ಇಬ್ಬರು ಗೆಳತಿಯರೊಂದಿಗೆ ವಾಸವಾಗಿದ್ದಳು. ಮೇ 12ರಂದು ರಾತ್ರಿ ಉಳಿದಿಬ್ಬರು ಗೆಳತಿಯರು ನೈಟ್ ಶಿಫ್ಟ್ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಯೋಗೀತಾ ರೂಮಿನಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ ಪಕ್ಕದ ರೂಮಿನ ಸ್ನೇಹಿತೆ ಸುಷ್ಮಾ, ಅಂದು ರಾತ್ರಿ ಆಕೆಯ ಜೊತೆಯಲ್ಲೇ ಮಲಗಿದ್ದಾಳೆ.
ತೀವ್ರ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ಸುಷ್ಮಾ, ಮೇ 13ರಂದು ಬೆಳಗಿನ ಜಾವ ಸುಮಾರು 4:30ರ ವೇಳೆಗೆ ಗಾಢ ನಿದ್ರೆಯಲ್ಲಿದ್ದ ಯೋಗೀತಾಳ ತಲೆಗೆ ಸಿಮೆಂಟ್ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ್ದಾಳೆ. ಬಳಿಕ ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಯನ್ನು ದೋಚಿದ್ದಾಳೆ.
ಮೇ 20ರ ಬುಧವಾರ ಬೆಳಗ್ಗೆ ನೈಟ್ ಶಿಫ್ಟ್ ಮುಗಿಸಿ ಉಳಿದ ಗೆಳತಿಯರು ರೂಮಿಗೆ ಬಂದಾಗ ಯೋಗೀತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ತನಗೇನೂ ತಿಳಿಯದಂತೆ ನಾಟಕವಾಡಿದ ಆರೋಪಿ ಸುಷ್ಮಾ, ಯೋಗೀತಾಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಕೂಡ ಜೊತೆಯಲ್ಲೇ ಹೋಗಿ ನೆರವಾಗಿದ್ದಳು. ಆರಂಭದಲ್ಲಿ ಯಾರೋ ಅಪರಿಚಿತರು ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎಂದೇ ಬಿಂಬಿಸಲಾಗಿತ್ತು.
ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ವಿಶೇಷ ತಂಡ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶಂಕಿತರನ್ನು ವಿಚಾರಣೆ ನಡೆಸಿತು. ಈ ವೇಳೆ ಪಕ್ಕದ ರೂಮಿನ ಸುಷ್ಮಾ ವರ್ತನೆ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕರಾಳ ಮುಖ ಬಯಲಾಗಿದೆ. ಆರೋಪಿ ಸುಷ್ಮಾ ತಾನೇ ಹಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿ ಸುಷ್ಮಾಳನ್ನು ಬಂಧಿಸಿದ್ದು, ಆಕೆ ಸುಲಿಗೆ ಮಾಡಿದ್ದ ಚಿನ್ನದ ಸರ ಮತ್ತು ಬೆಂಡೋಲೆಯನ್ನು ವಶಪಡಿಸಿಕೊಂಡಿದ್ದಾರೆ. ನಂಬಿದ ಸ್ನೇಹಿತೆಯೇ ಇಂತಹ ದ್ರೋಹ ಬಗೆದಿರುವುದು ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿದೆ.


















