ಬೆಂಗಳೂರು, ಮೇ 25: ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲನೆ ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮೇ 24ರಂದು ನಡೆದ ಎಸ್ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸಮಗ್ರ ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ.
ಯೋಜನೆಗಳಲ್ಲಿ ಪಾರದರ್ಶಕತೆ ಕಾಪಾಡುವುದು ಮತ್ತು ನಿಜವಾದ ಅರ್ಹರಿಗೆ ಮಾತ್ರ ಸೌಲಭ್ಯ ದೊರಕುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಜಮೆಯಾಗುತ್ತಿರುವ ಹಲವು ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸರ್ಕಾರಿ ಹಣದ ದುರ್ಬಳಕೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇದೇ ವೇಳೆ, ಆದಾಯ ತೆರಿಗೆ ಪಾವತಿಸುವವರೂ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಈ ಯೋಜನೆಗಳ ಉದ್ದೇಶ ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ನೆರವು ನೀಡುವುದಾಗಿರುವುದರಿಂದ, ತೆರಿಗೆ ಪಾವತಿಸುವವರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.
ಒಂದೇ ಮನೆಯ ಇಬ್ಬರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವ ಅಕ್ರಮ ಪ್ರಕರಣಗಳೂ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ಕೈಬಿಡಲು ಸರ್ಕಾರ ಸಿದ್ಧತೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯಲಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಹೊಸ ನಿಯಮಗಳು ಮತ್ತು ಮಾರ್ಗಸೂಚಿಗಳ ಆಧಾರದ ಮೇಲೆ ಸಂಪೂರ್ಣ ಪಟ್ಟಿಯನ್ನು ಮರು ರೂಪಿಸಲು ಸರ್ಕಾರ ಮುಂದಾಗಿದೆ.ಈ ಸಂಬಂಧ ಸರ್ಕಾರ ಶೀಘ್ರದಲ್ಲೇ ಹೊಸ ಗೈಡ್ಲೈನ್ಸ್ ಮತ್ತು ನಿಯಮಾವಳಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
















