ಮನೆ ಸುದ್ದಿ ಜಾಲ ಕಪ್ಪೆಚಿಪ್ಪು ಸಂಗ್ರಹ ವೇಳೆ ಸಮುದ್ರ ದುರಂತ : ಮತ್ತೊಂದು ಮೃತದೇಹ ಪತ್ತೆ, ಸಾವಿನ ಸಂಖ್ಯೆ 11ಕ್ಕೆ...

ಕಪ್ಪೆಚಿಪ್ಪು ಸಂಗ್ರಹ ವೇಳೆ ಸಮುದ್ರ ದುರಂತ : ಮತ್ತೊಂದು ಮೃತದೇಹ ಪತ್ತೆ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

0

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದವರ ಪೈಕಿ ಮೃತಪಟ್ಟವರ ಸಂಖ್ಯೆ ಇದೀಗ 11ಕ್ಕೆ ತಲುಪಿದೆ. ನಿನ್ನೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದರೆ, ಇಂದು ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಅವರ ಶವ ಕೂಡ ಪತ್ತೆಯಾಗಿದೆ.

NDRF ಹಾಗೂ ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆದುಕೊಳ್ಳಲಾಗಿದೆ. ಸಮುದ್ರದ ಅಲೆಗಳ ಅಬ್ಬರಕ್ಕೆ ಒಟ್ಟು 11 ಮಂದಿ ಬಲಿಯಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.

ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ರಕ್ಷಿಸಲು ಮುಂದಾದ ಅವರ ಪುತ್ರ ಉಮೇಶ್ ನಾಯ್ಕ್ ಕೂಡ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಾಯಿ ನೀರಿನಲ್ಲಿ ಕಪ್ಪೆಚಿಪ್ಪು ಸಂಗ್ರಹಿಸುತ್ತಿದ್ದರೆ, ಉಮೇಶ್ ಬಂಡೆಯ ಮೇಲೆ ಚಿಪ್ಪು ಹೆಕ್ಕುತ್ತಿದ್ದರು.ತಾಯಿ ಮುಳುಗುತ್ತಿರುವುದನ್ನು ಗಮನಿಸಿದ ತಕ್ಷಣ ಆಕೆಯನ್ನು ಉಳಿಸಲು ಉಮೇಶ್ ನೀರಿಗೆ ಧಾವಿಸಿದ್ದರು. ಆದರೆ ತಾಯಿಯನ್ನು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ನೀರಿನಿಂದ ಹೊರಬರಲು ಯತ್ನಿಸುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗೆಂದು ಉಮೇಶ್ ಅವರ ಕಾಲು ಹಿಡಿದ ಪರಿಣಾಮ ಅವರು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

ಮಕ್ಕಳಿಗೆ ಆಧಾರ ಕಳೆದುಹೋಯಿತು

ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದ ಕುಟುಂಬಗಳ ದುಸ್ಥಿತಿ ಮನಕಲಕುವಂತಿದೆ. ದುರಂತದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಇಬ್ಬರೂ ಮೃತಪಟ್ಟಿದ್ದು, ಅವರ ಮಕ್ಕಳಾದ ದರ್ಶನ (23) ಮತ್ತು ಕೀರ್ತನಾ (20) ಅನಾಥರಾಗಿದ್ದಾರೆ.ಮತ್ತೊಂದೆಡೆ ಮೃತಪಟ್ಟ ಲಕ್ಷ್ಮೀ ಶಿವರಾಮ ನಾಯ್ಕ್ ಅವರ ಪತಿ ಸುಮಾರು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಕುಟುಂಬ ಹಾಗೂ ನಾಲ್ವರು ಮಕ್ಕಳ ಶಿಕ್ಷಣದ ಹೊಣೆ ಹೊತ್ತಿದ್ದ ಲಕ್ಷ್ಮೀ ಅವರೂ ಮೃತಪಟ್ಟ ಹಿನ್ನೆಲೆ ಮಕ್ಕಳ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.