ನವದೆಹಲಿ: ಅಮೆರಿಕದ 250ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಅಚ್ಚರಿ ದೂರವಾಣಿ ಕರೆ ಮಾಡಿದ ಟ್ರಂಪ್, ಭಾರತಕ್ಕೆ ಸ್ನೇಹಪೂರ್ಣ ಸಂದೇಶ ನೀಡಿದ್ದಾರೆ.“ನನಗೆ ಭಾರತ ಮತ್ತು ಪ್ರಧಾನಿ ಮೋದಿ ತುಂಬಾ ಪ್ರಿಯರು. ಭಾರತ ಬಯಸುವ ಎಲ್ಲ ಸಹಕಾರವೂ ಅವರಿಗೆ ಲಭ್ಯವಾಗುತ್ತದೆ. ಭಾರತ ನನ್ನ ಮೇಲೆ 100 ಶೇಕಡಾ ನಂಬಿಕೆ ಇಡಬಹುದು” ಎಂದು ಡೊನಾಲ್ಡ್ ಟ್ರಂಪ್ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್, ಟ್ರಂಪ್ ಅವರಿಗೆ ಕರೆ ಮಾಡಿ, ಅಲ್ಲಿದ್ದ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಉದ್ಯಮಿಗಳ ಸಮ್ಮುಖದಲ್ಲಿ ಸ್ಪೀಕರ್ ಫೋನ್ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಟ್ರಂಪ್, ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.“ಭಾರತಕ್ಕೆ ಯಾವಾಗ ನೆರವು ಬೇಕಾದರೂ ಯಾರನ್ನು ಸಂಪರ್ಕಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಅವರು ನೇರವಾಗಿ ಇಲ್ಲಿ ಕರೆ ಮಾಡುತ್ತಾರೆ” ಎಂದು ಟ್ರಂಪ್ ಹೇಳಿದ್ದಾರೆ.
ಅದೇ ವೇಳೆ ಅಮೆರಿಕದ ಅಭಿವೃದ್ಧಿ ಕುರಿತು ಮಾತನಾಡಿದ ಟ್ರಂಪ್, “ನಾವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಲವು ದಾಖಲೆಗಳನ್ನು ನಿರ್ಮಿಸುತ್ತಿದ್ದೇವೆ. ದೇಶದಲ್ಲಿ ದಾಖಲೆಯ ಆರ್ಥಿಕ ಬೆಳವಣಿಗೆ ಹಾಗೂ ಷೇರು ಮಾರುಕಟ್ಟೆ ಸಾಧನೆ ಕಂಡು ಬರುತ್ತಿದೆ. ಭಾರತ ಬಯಸುವ ಅನೇಕ ಅವಕಾಶಗಳು ನಮ್ಮ ಬಳಿ ಇವೆ. ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ನಾನು” ಎಂದು ಹೇಳಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಪಸ್ಥಿತರಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಕಾರ್ಯವೈಖರಿಯನ್ನು ಕೂಡ ಟ್ರಂಪ್ ಶ್ಲಾಘಿಸಿದ್ದಾರೆ.
















