ಮನೆ ಸುದ್ದಿ ಜಾಲ ‘ಟಾಕ್ಸಿಕ್’ ಪರ ಯಶ್ ತಾಯಿ ಪುಷ್ಪಾ ಬ್ಯಾಟಿಂಗ್: ಟೀಸರ್ ಟೀಕೆಗಳಿಗೆ ಖಡಕ್ ಉತ್ತರ!

‘ಟಾಕ್ಸಿಕ್’ ಪರ ಯಶ್ ತಾಯಿ ಪುಷ್ಪಾ ಬ್ಯಾಟಿಂಗ್: ಟೀಸರ್ ಟೀಕೆಗಳಿಗೆ ಖಡಕ್ ಉತ್ತರ!

0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಈಗ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಟೀಸರ್ ಬಿಡುಗಡೆಯಾದ ನಂತರ ಹಲವು ರೀತಿಯ ಚರ್ಚೆಗಳು ಮತ್ತು ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್ ತಾಯಿ ಪುಷ್ಪಾ, ‘ಟಾಕ್ಸಿಕ್’ ಟೀಸರ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸಿನಿಮಾವನ್ನು ಬೆಂಬಲಿಸುವ ಮಾತುಗಳನ್ನು ಹೇಳಿದ್ದಾರೆ.

‘ಟಾಕ್ಸಿಕ್’ ಟೀಸರ್‌ನಲ್ಲಿ ಬೋಲ್ಡ್ ದೃಶ್ಯಗಳಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡ ಪ್ರೇಕ್ಷಕರಿಗೆ ಇಂತಹ ವಿಷಯ ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸಿದ ಪುಷ್ಪಾ, ಟೀಸರ್ ಮಾತ್ರ ನೋಡಿ ಸಂಪೂರ್ಣ ಸಿನಿಮಾವನ್ನು ಅಳೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. ಸಿನಿಮಾ ಬಿಡುಗಡೆ ತಡವಾಗುತ್ತಿರುವ ವಿಚಾರದಲ್ಲೂ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ.

‘ಇಂದಿನ ಯುವಜನರು ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತಾರೋ, ನಿರ್ದೇಶಕರು ಕೂಡ ಅದೇ ರೀತಿಯ ಕಥೆಗಳನ್ನು ಮಾಡುತ್ತಾರೆ. ಟೀಸರ್ ಎನ್ನುವುದು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಒಂದು ಭಾಗ ಮಾತ್ರ. ಟೀಸರ್ ನೋಡಿ ಇಡೀ ಸಿನಿಮಾ ಇದೇ ರೀತಿಯದ್ದಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಂಪೂರ್ಣ ಸಿನಿಮಾ ನೋಡಿದ ಬಳಿಕವೇ ಅದರ ಕಥೆ ಮತ್ತು ಉದ್ದೇಶ ಅರ್ಥವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಟ್ರೋಲ್ ಮಾಡುವವರಿಗೆ ಪರೋಕ್ಷವಾಗಿ ಉತ್ತರಿಸಿದ ಪುಷ್ಪಾ, ಪ್ರೇಕ್ಷಕರು ಯಾವ ರೀತಿಯ ವಿಷಯವನ್ನು ಇಷ್ಟಪಡುತ್ತಾರೋ ಅದನ್ನೇ ಯಶ್ ತಮ್ಮ ಸಿನಿಮಾಗಳ ಮೂಲಕ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನೂ ದೊಡ್ಡ ಸಿನಿಮಾಗಳು ಬಿಡುಗಡೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕನ್ನಡ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುತ್ತಿದೆ. ಇಂತಹ ಸಿನಿಮಾಗಳ ನಿರ್ಮಾಣಕ್ಕೆ ಸಮಯ ಬೇಕಾಗುತ್ತದೆ. ಅದನ್ನು ಬೇಸರವಾಗಿ ನೋಡುವುದಕ್ಕಿಂತ, ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವುದಕ್ಕೆ ಹೆಮ್ಮೆ ಪಡಬೇಕು’ ಎಂದು ಹೇಳಿದ್ದಾರೆ.