ಪಶ್ಚಿಮ ಬಂಗಾಳ, ಮೇ 25: ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಪಟ್ಟಣದ ರಸ್ತೆ ಬದಿಯ ಚುರ್ಮುರಿ ಅಂಗಡಿಗೆ ಭೇಟಿ ನೀಡಿ ತಿಂಡಿ ಸವಿದ ಘಟನೆ ರಾಷ್ಟ್ರದ ಗಮನ ಸೆಳೆದಿತ್ತು. ಇದೀಗ ಆ ಅಂಗಡಿಯ ಮಾಲೀಕನಿಗೆ ಅಪರಿಚಿತರಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಕ್ರಮ್ ಕುಮಾರ್ ಸಾವೊ ನಡೆಸುತ್ತಿದ್ದ ಸಣ್ಣ ಚುರ್ಮುರಿಅಂಗಡಿಗೆ ಪ್ರಧಾನಿ ಮೋದಿ ಭೇಟಿ ನೀಡಿದ ಬಳಿಕ ಆ ಸ್ಥಳ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಈ ಘಟನೆಯ ನಂತರ ಸಾವೊ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರಲು ಆರಂಭವಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಅವರು ಝಾರ್ಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚುರ್ಮುರಿ ಅಂಗಡಿಗೆ ಹೆಚ್ಚಿದ ಭದ್ರತೆ
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಕ್ರಮ್ ಕುಮಾರ್ ಸಾವೊ, ವಾಟ್ಸಾಪ್ ಮೂಲಕ ನಿರಂತರವಾಗಿ ಬೆದರಿಕೆ ಸಂದೇಶಗಳು ಹಾಗೂ ಕರೆಗಳು ಬರುತ್ತಿವೆ. ಕೊಲೆ ಮಾಡುವುದಾಗಿ ಹೆದರಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರ ಹಿನ್ನೆಲೆ ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಪಟ್ಟಣದ ರಾಜ್ ಕಾಲೇಜ್ ಮೋರ್ ಸಮೀಪದಲ್ಲಿರುವ ಚುರ್ಮುರಿಅಂಗಡಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಏಪ್ರಿಲ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಅಂಗಡಿಗೆ ಭೇಟಿ ನೀಡಿ ಚುರ್ಮುರಿ ಖರೀದಿಸಿದ್ದರು. ಈ ಘಟನೆಯ ಬಳಿಕ ಅಂಗಡಿ ಸಾರ್ವಜನಿಕರ ಗಮನ ಸೆಳೆದಿತ್ತು.
ಭಯದಿಂದ ಕೆಲ ದಿನ ಅಂಗಡಿ ಬಂದ್
ಶನಿವಾರ (ಮೇ 23, 2026) ಮಾಧ್ಯಮಗಳೊಂದಿಗೆ ಮಾತನಾಡಿದ ಬಿಕ್ರಮ್ ಕುಮಾರ್ ಸಾವೊ, “ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದರಿಂದ ನಾನು ಆತಂಕಕ್ಕೊಳಗಾಗಿದ್ದೆ. ಕುಟುಂಬದವರೂ ಸಹ ಭಯಭೀತರಾಗಿದ್ದರು. ಈ ಕಾರಣದಿಂದ ಕೆಲವು ದಿನಗಳ ಕಾಲ ಅಂಗಡಿಯನ್ನು ಮುಚ್ಚಿದ್ದೆ,” ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಝಾರ್ಗ್ರಾಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಕರೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಪತ್ತೆಹಚ್ಚಲು ತಜ್ಞರ ಸಹಾಯ ಪಡೆಯಲಾಗುತ್ತಿದೆ. ಸದ್ಯ ಅಂಗಡಿಯ ಹೊರಭಾಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಂಗಡಿ ಮಾಲೀಕ ಬಿಕ್ರಮ್ ಕುಮಾರ್ ಸಾವೊ ಅವರಿಗೆ ವೈಯಕ್ತಿಕ ಭದ್ರತೆಯನ್ನೂ ಒದಗಿಸಲಾಗಿದೆ.


















