ಉನ್ನಾವೋ, ಮೇ 26: ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಬಸ್ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಉನ್ನಾವೋ ಜಿಲ್ಲೆಯ ಔರಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಲಕ್ನೋ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ.
ಔರಾಸ್ ಎಸ್ಒ ಸಂಜೀವ್ ಕುಶ್ವಾಹ ನೀಡಿದ ಮಾಹಿತಿಯಂತೆ, ಮೃತರಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಹಾಗೂ ಕೈದಿ ಸೇರಿದ್ದಾರೆ. ಮೃತ ಸಬ್ ಇನ್ಸ್ಪೆಕ್ಟರ್ನನ್ನು ರಾಮಚಂದ್ರ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ರಾಮಚಂದ್ರ ಅವರು ಕೈದಿ ಛತ್ರಪಾಲ್ ಜೊತೆ ಸಿವಾನ್ನಿಂದ ದೆಹಲಿಗೆ ತೆರಳಿ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಆರಂಭಿಸಿದರು.
ಇದೇ ವೇಳೆ, ಮಹಾರಾಷ್ಟ್ರದ ಧುಲೆ ಸಮೀಪದ ಮುಂಬೈ-ಆಗ್ರಾ ಹೆದ್ದಾರಿಯ ಲಾಲಿಂಗ್ ಘಾಟ್ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಮತ್ತೊಂದು ಭೀಕರ ಅಪಘಾತ ನಡೆದಿದೆ. ಮರಳು ಸಾಗಣೆ ಡಂಪಿಂಗ್ ಯಂತ್ರ ಹಾಗೂ ಹಲವು ಪ್ರಯಾಣಿಕ ವಾಹನಗಳ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಿಂದ 6 ಮಂದಿ ಮೃತಪಟ್ಟಿದ್ದು, 10 ರಿಂದ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಈ ಅಪಘಾತದಿಂದ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಯಿತು.ಪ್ರಾಥಮಿಕ ತನಿಖೆ ಪ್ರಕಾರ, ಲಾಲಿಂಗ್ ಘಾಟ್ ವಿಭಾಗದಲ್ಲಿ ಸಾಗುತ್ತಿದ್ದ ವೇಳೆ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.


















