ಮನೆ ಸುದ್ದಿ ಜಾಲ ಡಿ.ಕೆ ಶಿವಕುಮಾರ್ ನಿರ್ಧಾರದಿಂದ ಸಾವಿರಾರು ಬಿ ಖಾತಾ ಆಸ್ತಿದಾರರಿಗೆ ಲಕ್ಷಾಂತರ ರೂ. ನಷ್ಟ!

ಡಿ.ಕೆ ಶಿವಕುಮಾರ್ ನಿರ್ಧಾರದಿಂದ ಸಾವಿರಾರು ಬಿ ಖಾತಾ ಆಸ್ತಿದಾರರಿಗೆ ಲಕ್ಷಾಂತರ ರೂ. ನಷ್ಟ!

0

ಬೆಂಗಳೂರು : ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಹತ್ವದ ಸೌಲಭ್ಯ ಘೋಷಣೆ ಮಾಡಿದ್ದಾರೆ. ಆದರೆ ಇದೇ ನಿರ್ಧಾರದಿಂದ ಈಗಾಗಲೇ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಕೊಂಡಿರುವ ಸಾವಿರಾರು ಜನ ಆಸ್ತಿದಾರರು ಲಕ್ಷಾಂತರ ರೂಪಾಯಿ ಹೆಚ್ಚುವರಿ ಹಣ ಪಾವತಿಸಿದಂತಾಗಿದೆ.

ಬೆಂಗಳೂರಿನಲ್ಲಿ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡುವವರಿಗೆ ಸರ್ಕಾರ ದೊಡ್ಡ ಮಟ್ಟದ ರಿಯಾಯಿತಿ ನೀಡಿದೆ. ಸಾಮಾನ್ಯವಾಗಿ ಎ ಖಾತಾ ಪರಿವರ್ತನೆಗೆ ಆಸ್ತಿಯ ಗೈಡ್ಲೈನ್ ವ್ಯಾಲ್ಯೂನ ಶೇ.5ರಷ್ಟು ಶುಲ್ಕ ಪಾವತಿಸಬೇಕಾಗಿತ್ತು. ಆದರೆ ನೂರು ದಿನಗಳ ಒಳಗೆ ಅರ್ಜಿ ಸಲ್ಲಿಸುವವರಿಗೆ ಕೇವಲ ಶೇ.2ರಷ್ಟು ಶುಲ್ಕ ಮಾತ್ರ ವಿಧಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಸಿಕೊಳ್ಳಲು ಆಸ್ತಿದಾರರು ಗೈಡ್ಲೈನ್ ವ್ಯಾಲ್ಯೂನ ಶೇ.5ರಷ್ಟು ಹಣ ಪಾವತಿಸುತ್ತಿದ್ದರು. ಆದರೆ ಮೇ 12ರಂದು ಘೋಷಿಸಲಾದ ಭೂ ಗ್ಯಾರಂಟಿ ಯೋಜನೆಯ ಭಾಗವಾಗಿ, ಇನ್ನು ಮುಂದೆ ಬಿ ಖಾತಾ ಆಸ್ತಿದಾರರು ಕೇವಲ ಶೇ.2ರಷ್ಟು ಮೊತ್ತ ಪಾವತಿಸಿ ಎ ಖಾತಾಗೆ ಬದಲಾವಣೆ ಮಾಡಿಸಿಕೊಳ್ಳಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಹೊಸ ನಿಯಮದಿಂದ ಮುಂದಿನ ದಿನಗಳಲ್ಲಿ ಲಕ್ಷಾಂತರ ಆಸ್ತಿದಾರರಿಗೆ ಲಾಭವಾಗಲಿದೆಯಾದರೂ, ಈಗಾಗಲೇ ಹೆಚ್ಚಿನ ಶುಲ್ಕ ಪಾವತಿಸಿ ಎ ಖಾತಾ ಮಾಡಿಕೊಂಡಿರುವ ಅಂದಾಜು 7 ಸಾವಿರದಿಂದ 9 ಸಾವಿರ ಆಸ್ತಿದಾರರಿಗೆ ಭಾರೀ ನಷ್ಟ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹಲವರು ಶೇ.60ರಷ್ಟು ಹೆಚ್ಚುವರಿ ಹಣ ಪಾವತಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉದಾಹರಣೆಗೆ, ಒಬ್ಬ ಆಸ್ತಿದಾರರು ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗಾಗಿ ಸುಮಾರು 1.67 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ ಹೊಸ ನಿಯಮ ಜಾರಿಯಾದ ನಂತರ ಅದೇ ಆಸ್ತಿಗೆ ಕೇವಲ 67 ಸಾವಿರ ರೂಪಾಯಿ ಪಾವತಿಸಿದರೆ ಸಾಕಾಗುತ್ತಿದೆ. ಇದರಿಂದ ಸುಮಾರು 1 ಲಕ್ಷ ರೂಪಾಯಿ ವ್ಯತ್ಯಾಸ ಉಂಟಾಗಿದೆ.

ಬೆಂಗಳೂರಿನಲ್ಲಿ ಅಂದಾಜು 7 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿವೆ. ಈ ಹೊಸ ಸೌಲಭ್ಯದಿಂದ ಸುಮಾರು 6.90 ಲಕ್ಷ ಆಸ್ತಿದಾರರಿಗೆ ಅನುಕೂಲವಾಗಲಿದೆ. ಆದರೆ ಈಗಾಗಲೇ ಎ ಖಾತಾ ಪರಿವರ್ತನೆ ಪೂರ್ಣಗೊಳಿಸಿರುವ ಸುಮಾರು 10 ಸಾವಿರ ಆಸ್ತಿದಾರರು ಸರ್ಕಾರದಿಂದ ವಿಶೇಷ ಪರಿಹಾರ ಅಥವಾ ಸೌಲಭ್ಯ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಹಲವು ಆಸ್ತಿದಾರರು ಪ್ರಾಪರ್ಟಿ ಸುರಕ್ಷತೆ ಹಾಗೂ ಕಾನೂನು ಸ್ಪಷ್ಟತೆಗಾಗಿ ಮೊದಲೇ ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ ಮಾಡಿಕೊಂಡಿದ್ದರು. ಆದರೆ ಇದೀಗ ಸರ್ಕಾರ ಶುಲ್ಕವನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ, ಸ್ವಲ್ಪ ದಿನ ಕಾಯಿದ್ದರೆ ಲಕ್ಷಾಂತರ ರೂಪಾಯಿ ಉಳಿಸಿಕೊಳ್ಳಬಹುದಿತ್ತು ಎಂಬ ಬೇಸರ ಅವರಲ್ಲಿ ಕಾಣಿಸುತ್ತಿದೆ.