ಮನೆ ಸುದ್ದಿ ಜಾಲ ಪೊಲೀಸರನ್ನು ಕಂಡು ಕಟ್ಟಡದಿಂದ ಜಿಗಿದ ರೌಡಿ ‘ಸ್ಪಾಟ್ ನಾಗ’; ಸೊಂಟಕ್ಕೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

ಪೊಲೀಸರನ್ನು ಕಂಡು ಕಟ್ಟಡದಿಂದ ಜಿಗಿದ ರೌಡಿ ‘ಸ್ಪಾಟ್ ನಾಗ’; ಸೊಂಟಕ್ಕೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

0

ಬೆಂಗಳೂರು, ಮೇ.26 : ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ರೌಡಿಶೀಟರ್ ಒಬ್ಬ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲ್ಭಾಗದಿಂದ ಕೆಳಕ್ಕೆ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪ್ರದೇಶದಲ್ಲಿ ನಡೆದಿದೆ. ಗಾಯಗೊಂಡಿರುವ ಆರೋಪಿಯನ್ನು ನಗರದಲ್ಲೇ ಕುಖ್ಯಾತ ರೌಡಿ ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂದು ಗುರುತಿಸಲಾಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ಈ ಹಿಂದೆ ಯುವಕನೊಬ್ಬನ ಮೇಲೆ ಚಾಕು ದಾಳಿ ನಡೆಸಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಪಾಟ್ ನಾಗ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಇದೇ ವೇಳೆ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಆತ ಗುಪ್ತವಾಗಿ ಹೊಸ ಮನೆ ನಿರ್ಮಾಣ ಮಾಡಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ದಾಳಿ ನಡೆಸಿದ್ದರು.

ಪೊಲೀಸರು ಬರುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಸ್ಪಾಟ್ ನಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಬಂಧಿಸಲು ಬಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಹಾಕಿ, ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಪೊಲೀಸರಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆತ, ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲಿನಿಂದ ಕೆಳಗೆ ಜಿಗಿದಿದ್ದಾನೆ.

ಕಟ್ಟಡದಿಂದ ಕೆಳಗೆ ಬಿದ್ದ ಪರಿಣಾಮ ಸ್ಪಾಟ್ ನಾಗನಿಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಓಡಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾನೆ. ಕೂಡಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಆತನ ಸೊಂಟದ ಮೂಳೆ ಭಾಗದಲ್ಲಿ ಜಾಯಿಂಟ್ ಕಂಪ್ರೆಷನ್ ಆಗಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದುದು, ಜೀವ ಬೆದರಿಕೆ ಹಾಕಿದುದು ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಪಾಟ್ ನಾಗ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.