ಕಾರವಾರ (ಉತ್ತರ ಕನ್ನಡ) : ಹೊನ್ನಾವರ ತಾಲೂಕಿನ ಕಾಸರಕೋಡ ಹಾಗೂ ತಾರೇಬಾಗಿಲು ಸಮೀಪದ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಒಂದು ಮುಳುಗಡೆಯಾದ ಘಟನೆ ನಡೆದಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಕೋಲದ ಬೆಳಂಬಾರ ಗ್ರಾಮದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ಶ್ರೀ ನವರತ್ನ ಹೆಸರಿನ ಬೋಟ್ ಈ ದುರ್ಘಟನೆಗೆ ತುತ್ತಾಗಿದೆ. ಈ ಬೋಟ್ ಅಂಕೋಲದ ಬೆಳಂಬಾರದಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿತ್ತು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟಿನ ಹೊರಭಾಗಕ್ಕೆ ಹಾನಿಯಾಗಿ ನೀರು ನುಗ್ಗತೊಡಗಿದೆ. ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ ಎನ್ನಲಾಗುತ್ತಿದೆ.
ಮತ್ತು ಈ ವೇಳೆ ಬೋಟ್‌ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಮತ್ತು ಲತೇಶ್ ಖಾರ್ವಿ ಎಂಬ ಏಳು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಎಚ್ಚೆತ್ತ ಸಮೀಪದಲ್ಲಿದ್ದ ಮತ್ತೊಂದು ಬೋಟ್‌ನಲ್ಲಿದ್ದ ಇಕ್ಬಾಲ್ ಅಬ್ದುಲ್ ಗಫೂರ್ ಮತ್ತು ಅವರ ತಂಡ, ತಕ್ಷಣ ಸ್ಪಂದಿಸಿ ಆಳ ಸಮುದ್ರದಲ್ಲಿ ಸಂಕಷ್ಟದಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬೋಟ್ ಮುಳುಗಡೆಯಾದ ಪರಿಣಾಮ ಬೋಟ್‌ನಲ್ಲಿ ಇದ್ದ ಮೀನುಗಾರಿಕಾ ಪರಿಕರಗಳು ಹಾಗೂ ಬೋಟ್ ಸಂಪೂರ್ಣ ಹಾನಿಗೀಡಾಗಿದ್ದು, ಮಾಲೀಕರಿಗೆ ಸುಮಾರು 80 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಸಿ.ಎಸ್.ಪಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಸಕಾಲದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿದುಬಂದಿದೆ.
















