ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನು ಆರೋಪಮುಕ್ತಗೊಳಿಸಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಸಂಬಂಧ ದಾಖಲಾಗಿದ್ದ ಆರೋಪಪಟ್ಟಿಯನ್ನು ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ ಎನ್ನಲಾಗುತ್ತಿದೆ.
ಈ ಕುರಿತು ಘಟನೆಯು 2024 ಮೇ 18ರಂದು ಅರ್ಜಿದಾರ ಆರೋಪಿತರ ಮನೆಯಲ್ಲಿ ತನ್ನ ಕ್ಷೇತ್ರದ ಗುತ್ತಿಗೆದಾರರ ಸಭೆ ನಡೆದಿದ್ದು, ಆ ಸಂದರ್ಭದಲ್ಲಿ ದೂರುದಾರರ ವಿರುದ್ಧ ಜಾತಿ ನಿಂದನೆ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ಇದು ಆಪಲ್ ವಾಚ್‌ನಲ್ಲಿ ರೆಕಾರ್ಡ್ ಆಗಿದೆ. ಈ ಅಂಶ 2024ರ ಸೆಪ್ಟಂಬರ್ 13ರಂದು ದೂರುದಾರರಿಗೆ ತಿಳಿದಿದ್ದು, ದೂರು ದಾಖಲಿಸಲಾಗಿದೆ. ಆದರೆ, ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಾದರೆ, ಅಂತಹ ಜಾತಿನಿಂದನೆ ಘಟನೆ ಸಾರ್ವಜನಿಕ ಸ್ಥಳದಲ್ಲಿ ನಡೆಯಬೇಕು ಎಂಬುದಾಗಿದೆ. ಆದರೆ, ಈ ಪ್ರಕರಣ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ. ಜತೆಗೆ, ಘಟನೆ ನಡೆದ ಹಲವು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದ್ದು, ಆರೋಪಿ ಮುನಿರತ್ನ ಅವರನ್ನು ಆರೋಪ ಮುಕ್ತಗೊಳಿಸಲಾಗುತ್ತಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಅರ್ಜಿದಾರರ ವಿರುದ್ಧದ ಆರೋಪಗಳು ಅನುಮಾನಕ್ಕೆ ಕಾರಣವಾಗುತ್ತಿವೆ.
ಹಾಗೂ ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿ ಮತ್ತು ಸಾಕ್ಷ್ಯಾಧಾರಗಳಿಂದ ಆರೋಪವನ್ನು ಸಾಬೀತು ಪಡಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಅಲ್ಲದೆ, ಆರೋಪಿತ ಜಾತಿ ನಿಂದನೆ ನಡೆದ ಸಂದರ್ಭದಲ್ಲಿ ದೂರುದಾರ ವೇಲು ನಾಯ್ಕರ್ ಸ್ಥಳದಲ್ಲೇ ಹಾಜರಿರಲಿಲ್ಲ. ನ್ಯಾಯಾಲಯವು ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಸಾಬೀತಾಗಬೇಕಾದರೆ ಜಾತಿ ನಿಂದನೆ ಸಾರ್ವಜನಿಕರು ನೋಡುವಂತಹ ಸ್ಥಳದಲ್ಲಿ ನಡೆಯಬೇಕು ಹಾಗೂ ಅವಮಾನಕ್ಕೊಳಗಾದ ವ್ಯಕ್ತಿಯೂ ಅಲ್ಲಿ ಹಾಜರಿರಬೇಕು ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಆ ಎರಡೂ ಅಂಶಗಳು ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅದೇ ರೀತಿ ಭಾರತೀಯ ದಂಡ ಸಂಹಿತೆಯ 504 ಮತ್ತು 506ನೇ ಕಲಂಗಳಡಿ ದಾಖಲಿಸಲಾಗಿದ್ದ ಉದ್ದೇಶಪೂರ್ವಕ ಅವಮಾನ ಹಾಗೂ ಜೀವ ಬೆದರಿಕೆ ಆರೋಪಗಳಿಗೂ ಅಗತ್ಯ ಅಂಶಗಳು ದಾಖಲೆಗಳಲ್ಲಿ ಕಾಣುತ್ತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ದೂರುದಾರರಿಗೆ ಘಟನೆಯ ಮಾಹಿತಿ ಸುಮಾರು ನಾಲ್ಕು ತಿಂಗಳ ಬಳಿಕ ತಿಳಿದಿರುವುದರಿಂದ ಭಯ ಅಥವಾ ಆತಂಕ ಉಂಟುಮಾಡುವ ಉದ್ದೇಶ ಸಾಬೀತಾಗುವುದಿಲ್ಲ ಎಂದು ಹೇಳಿದೆ ಎಂದು ಪೀಠ ತಿಳಿಸಿದೆ ಎನ್ನಲಾಗುತ್ತಿದೆ.

















