ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ಅವರ ಪತಿ ವಿಜಯ್ ದೇವರಕೊಂಡ ಇತ್ತೀಚೆಗೆ ಜಪಾನ್‌ಗೆ ತೆರಳಿದ್ದರು. ಅನಿಮೆ ಕಾರ್ಯಕ್ರಮಕ್ಕೆ ರಶ್ಮಿಕಾ ಹೋಸ್ಟ್ ಆಗಿದ್ದರಿಂದ ಅವರಿಗೆ ಜಪಾನ್‌ಗೆ ಆಹ್ವಾನ ಬಂದಿದ್ದು, ಈ ವೇಳೆ ವಿಜಯ್ ದೇವರಕೊಂಡ ಕೂಡ ಜೊತೆಯಾಗಿದ್ದರು.
ಈ ಸುಂದರ ಪ್ರವಾಸದ ಕ್ಷಣಗಳನ್ನು ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಇಬ್ಬರೂ ತಮ್ಮ ಪ್ರವಾಸಗಳನ್ನು ಗುಪ್ತವಾಗಿ ಇಟ್ಟುಕೊಳ್ಳುತ್ತಿದ್ದರೆ, ಈ ಬಾರಿ ಯಾವುದೇ ಮುಚ್ಚುಮರೆಯಿಲ್ಲದೆ ಫೋಟೋಗಳನ್ನು ಹಂಚಿಕೊಂಡಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.
ಜಪಾನ್‌ನ ಸಾಂಪ್ರದಾಯಿಕ ಉಡುಗೆ ಯುಕಾಟಾ ಧರಿಸಿ ರಶ್ಮಿಕಾ ಗ್ಲಾಮರಸ್ ಆಗಿ ಪೋಸ್ ನೀಡಿದ್ದು, “ಈ ವರ್ಷ ಜಪಾನ್ ಪ್ರವಾಸ ಇನ್ನಷ್ಟು ಮಜಾ ನೀಡಿತು” ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಜಪಾನ್‌ನ ಸ್ಥಳೀಯ ಆಹಾರವನ್ನು ಸವಿಯುತ್ತಿರುವುದು, ಅಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಆಸ್ವಾದಿಸುವುದು ಹಾಗೂ ಹಿನ್ನೆಲೆಯಲ್ಲಿ ಮೌಂಟ್ ಫುಜಿಯ ಸುಂದರ ದೃಶ್ಯ ಕಾಣುವಂತೆ ವಿಜಯ್ ದೇವರಕೊಂಡ ಅವರನ್ನು ತಬ್ಬಿಕೊಂಡಿರುವ ರೋಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಭಿಮಾನಿಗಳು ಹಾರ್ಟ್ ಎಮೋಜಿಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು “ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮಿಸೆಸ್ ದೇವರಕೊಂಡ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ನಿಮ್ಮ ಪತಿಯೊಂದಿಗೆ ಜೀವನವನ್ನು ಎಂಜಾಯ್ ಮಾಡುತ್ತಿರುವುದು ಸಂತೋಷ ತಂದಿದೆ” ಎಂದು ತಿಳಿಸಿದ್ದಾರೆ.
ಇನ್ನು ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಕುಂದರ್ ಕೂಡ ಕಾಮೆಂಟ್ ಮಾಡಿದ್ದು, “ನಾನು ನಾಳೆಯೇ ಜಪಾನ್‌ಗೆ ಹೋಗುತ್ತಿದ್ದೇನೆ, ಅಲ್ಲಿನ ಭೇಟಿ ನೀಡಬೇಕಾದ ಸ್ಥಳಗಳ ಬಗ್ಗೆ ತಿಳಿಯಲು ನಿಮಗೆ ಕರೆ ಮಾಡುತ್ತೇನೆ” ಎಂದು ಹೇಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಹಲವು ವರ್ಷಗಳ ಪ್ರೀತಿಯ ನಂತರ ಈ ವರ್ಷ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಕೊಡವ ಹಾಗೂ ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
















