ಮನೆ ಸುದ್ದಿ ಜಾಲ ಲುಧಿಯಾನ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ; ತಂದೆ-ಮಗ ಸೇರಿದಂತೆ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರ

ಲುಧಿಯಾನ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ; ತಂದೆ-ಮಗ ಸೇರಿದಂತೆ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರ

0

ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿರುವ ಕಾರ್ಖಾನೆಯಲ್ಲಿ ತಡರಾತ್ರಿ ವಿಷಕಾರಿ ಅನಿಲ ಸೋರಿಕೆ ಸಂಭವಿಸಿ ಮೂವರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಅನಿಲ ಸೋರಿಕೆಯಿಂದ ಪ್ರಜ್ಞಾಹೀನರಾದ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ ಗಾಸ್ಪುರ ನಿವಾಸಿಗಳಾದ ಮಾನ್ ಸಿಂಗ್ ಮತ್ತು ಅವರ ಪುತ್ರ ಅಮಿತ್ ಸೇರಿದ್ದಾರೆ. ಇನ್ನೊಬ್ಬ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

ಲುಧಿಯಾನದ ಗಾಸ್ಪುರದ ಗಗನ್ ನಗರ ಪ್ರದೇಶದಲ್ಲಿ ಉಪಕರಣ ತಯಾರಿಸುವ ಕಾರ್ಖಾನೆ ಇದೆ. ಭಾನುವಾರ ರಾತ್ರಿ ಕಾರ್ಮಿಕರು ಕೆಲಸಕ್ಕೆ ಆಗಮಿಸಿದ್ದ ವೇಳೆ ತಡರಾತ್ರಿ ವಿಷಕಾರಿ ಅನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ಮೃತರ ಮಗಳು ರೇಣು ಅವರು, ತನ್ನ ತಂದೆಯನ್ನು ತಡರಾತ್ರಿ ಕೆಲಸಕ್ಕೆ ಬಲವಂತಪಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಅನಿಲ ಸೋರಿಕೆ ಬಳಿಕ ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರ್ಖಾನೆ ಮಾಲೀಕರು ಆಸ್ಪತ್ರೆಗೆ ದಾಖಲಿಸಿದರೂ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ತಂದೆ ಬೆಳಗ್ಗೆ ಮನೆಗೆ ಬಾರದ ಕಾರಣ ಕಾರ್ಖಾನೆ ಬಳಿ ತೆರಳಿದಾಗ ಅನಿಲ ಸೋರಿಕೆಯಿಂದ ಹಲವರು ಆಸ್ಪತ್ರೆಗೆ ಸೇರಿಸಿರುವ ವಿಚಾರ ತಿಳಿಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ತಮ್ಮ ತಂದೆ ಮಾನ್ ಸಿಂಗ್ ಮತ್ತು ಅಮಿತ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ.