ಬೆಂಗಳೂರು: ಜೂನ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ರೂ.46 ಏರಿಕೆಯಾಗಿದ್ದು, ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್ ಹಾಗೂ ಕ್ಯಾಟರಿಂಗ್ ಉದ್ಯಮದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಆದರೂ ಸದ್ಯಕ್ಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವ ಉದ್ದೇಶ ಇಲ್ಲ ಎಂದು ಹೋಟೆಲ್ ಉದ್ಯಮದ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ಮಾತನಾಡಿ, ಪ್ರತಿ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ದರದಲ್ಲಿ ಏರಿಳಿತ ಸಾಮಾನ್ಯ. ಆದರೆ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ದರ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ತಿಂಗಳ ಆರಂಭದಲ್ಲಿ ರೂ.40ರ ಆಸುಪಾಸಿನಲ್ಲಿ ದರ ಬದಲಾವಣೆ ಆಗುತ್ತದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಒಟ್ಟಾರೆ ರೂ.900ಕ್ಕೂ ಹೆಚ್ಚು ಏರಿಕೆಯಾಗಿರುವುದರಿಂದ ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಹೆಚ್ಚುವರಿ ವೆಚ್ಚವನ್ನು ಸದ್ಯಕ್ಕೆ ಹೋಟೆಲ್‌ಗಳೇ ಭರಿಸುತ್ತಿವೆ. ಗ್ರಾಹಕರ ಮೇಲೆ ಹೊರೆ ಹಾಕುವ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ.
ಎಲ್‌ಪಿಜಿ ದರದಲ್ಲಿ ಭಾರೀ ಏರಿಕೆ ಕಂಡಾಗ ಮಾತ್ರ ಈ ಹಿಂದೆ ಮೆನು ದರ ಪರಿಷ್ಕರಣೆ ಮಾಡಲಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿದ ಬಿಕ್ಕಟ್ಟಿನ ಬಳಿಕ ವಾಣಿಜ್ಯ ಎಲ್‌ಪಿಜಿ ದರಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಮಾರ್ಚ್ ತಿಂಗಳಲ್ಲಿ ಸುಮಾರು ರೂ.1,845 ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ ರೂ.3,199ಕ್ಕೆ ಏರಿಕೆಯಾಗಿದ್ದು, ಅಲ್ಪಾವಧಿಯಲ್ಲೇ ರೂ.1,354ರಷ್ಟು ಹೆಚ್ಚಳ ಕಂಡಿದೆ.
ಇಂಧನ ದರಗಳ ಏರಿಕೆಯಿಂದ ಹೋಟೆಲ್ ಹಾಗೂ ಆಹಾರ ಸೇವಾ ಕ್ಷೇತ್ರದ ಕಾರ್ಯಾಚರಣಾ ವೆಚ್ಚವೂ ಹೆಚ್ಚಾಗಿದೆ. ಕಚ್ಚಾ ವಸ್ತುಗಳು, ವಿದ್ಯುತ್ ಮತ್ತು ಇತರೆ ಸೇವಾ ವೆಚ್ಚಗಳ ಜೊತೆಗೆ ಎಲ್‌ಪಿಜಿ ದರ ಏರಿಕೆಯೂ ಉದ್ಯಮದ ಮೇಲೆ ಒತ್ತಡ ಹೆಚ್ಚಿಸಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಭವಿಷ್ಯದಲ್ಲಿ ಇಂಧನ ದರಗಳ ಅಸ್ಥಿರತೆಯಿಂದಾಗುವ ಹೊಡೆತವನ್ನು ಕಡಿಮೆ ಮಾಡಲು ಹಲವು ಹೋಟೆಲ್‌ಗಳು ಪರ್ಯಾಯ ಇಂಧನ ಮೂಲಗಳತ್ತ ಮುಖ ಮಾಡುತ್ತಿವೆ. ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆ ಹಾಗೂ ಜೈವಿಕ ಇಂಧನ ಬಳಕೆಯಂತಹ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ.

















