ಮನೆ ಕ್ರೀಡೆ ಮಹಿಳಾ ಟಿ20 ವಿಶ್ವಕಪ್‌ 2026 – ಗರಿಷ್ಠ 81.8 ಕೋಟಿ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

ಮಹಿಳಾ ಟಿ20 ವಿಶ್ವಕಪ್‌ 2026 – ಗರಿಷ್ಠ 81.8 ಕೋಟಿ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

0

ನವದೆಹಲಿ : 2026ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಈವರೆಗಿನ ಗರಿಷ್ಠ 81.8 ಕೋಟಿ ರೂ. ಬಹುಮಾನ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. ಈ ಬಾರಿ ಮಹಿಳಾ ಟಿ20 ವಿಶ್ವಕಪ್‌ಗೆ 2 ತಿಂಗಳು ಇರುವಾಗಲೇ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಪ್ರಕಟಿಸಿದೆ. ಜೂ.12ರಿಂದ ಜು.5ರವರೆಗೆ ಇಂಗ್ಲೆಂಡ್-ವೇಲ್ಸ್‌ನಲ್ಲಿ ಟೂರ್ನಿ ನಡೆಯಲಿದ್ದು, ಬಹುಮಾನ ಮೊತ್ತ 81.8 ಕೋಟಿ ರೂ. ಎಂದಿದೆ.

ಇದಕ್ಕೂ ಮುನ್ನ 2024ರಲ್ಲಿ 74 ಕೋಟಿ ರೂ. ಬಹುಮಾನದ ಮೊತ್ತವಿತ್ತು. ಇದೀಗ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚಿಸಿದ್ದು, ಈ ಪೈಕಿ ಕಪ್ ವಿಜೇತ ತಂಡಕ್ಕೆ 21.80 ಕೋಟಿ ರೂ. ಸಿಗಲಿದೆ. ರನ್ನರ್-ಅಪ್‌ಗೆ 10 ಕೋಟಿ ರೂ. ನಗದು ಬಹುಮಾನ ಸಿಗಲಿದೆ.

ಸೆಮಿಫೈನಲ್‌ನಲ್ಲಿ ಸೋತ 2 ತಂಡಗಳಿಗೆ ತಲಾ 6.29 ಕೋಟಿ ರೂ. ಲಭಿಸಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 12 ತಂಡಗಳು ಕನಿಷ್ಠ ತಲಾ 2.06 ಕೋಟಿ ರೂ. ಪಡೆದುಕೊಳ್ಳಲಿವೆ. ಗುಂಪು ಹಂತದ ಪ್ರತಿ ಪಂದ್ಯದ ಗೆಲುವಿಗೆ 29 ಲಕ್ಷ ರೂ. ಸಿಗಲಿದೆ ಎಂದು ಐಸಿಸಿ ತಿಳಿಸಿದೆ.

ಜೂನ್ 12 ರಂದು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಪಂದ್ಯಾವಳಿ ಆರಂಭವಾಗಲಿದೆ. ಟೂರ್ನಿಯ ಉದ್ಘಾಟನಾ ತಂಡಗಳೊಂದಿಗೆ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗವಹಿಸಲಿದ್ದು, 24 ದಿನಗಳ ಕಾಲ ಏಳು ಸ್ಥಳಗಳಲ್ಲಿ 33 ಪಂದ್ಯಗಳು ನಡೆಯಲಿವೆ.