ನವದೆಹಲಿ: ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ ದೆಹಲಿಯಲ್ಲಿ ಇಂದು ಹೈಕಮಾಂಡ್ ಮಹತ್ವದ ಸಭೆ ನಡೆಸಿದೆ. ರಾಜ್ಯದಲ್ಲಿನ ಹೊಸ ಸಂಪುಟ ರಚನೆ ಕುರಿತು ರೂಪುರೇಷೆಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಗುತ್ತಿದೆ. ಹಂಗಾಮಿ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದು, ಸಚಿವ ಸ್ಥಾನಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸಭೆಗೆ ತೆರಳುವ ಮುನ್ನ ಮಾತನಾಡಿದ ಹಂಗಾಮಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಭೇಟಿ ಅಜೆಂಡಾ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ ನನಗೆನೂ ತಿಳಿದಿಲ್ಲ ಎನ್ನುತ್ತಾ ಮುಂದೆ ಸಾಗಿದರು. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಸಚಿವರು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಳಿಯುವುದು ಅನುಮಾನ ಎಂಬ ಊಹಾಪೋಹಾಗಳು ಹರಡಿದೆ ಎನ್ನಲಾಗಿದೆ.
ಈ ನಡುವೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸಂಪುಟ ಸೇರುವುದು ಖಚಿತವಾಗಿದೆ. ಈ ಬಗ್ಗೆ ಯತೀಂದ್ರಗೆ ಈ ಹಿಂದೆಯೇ ರಾಹುಲ್ ಗಾಂಧಿ ಭರವಸೆ ನೀಡಿದ್ದರು ಎನ್ನಲಾಗಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಉನ್ನತ ಹುದ್ದೆ ನೀಡಲಾಗುವುದು ಎಂಬ ಊಹಾಪೋಹಗಳ ನಡುವೆಯೇ ಇಂದು ಬೆಳಗ್ಗೆ ಪ್ರಿಯಾಂಕಾ ಖರ್ಗೆ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಚಿವ ಸ್ಥಾನದ ಲಾಬಿಯಾಗಿ ರಾಜ್ಯದ ಉನ್ನತ ಕಾಂಗ್ರೆಸ್ ನಾಯಕರು ಮತ್ತು ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಇಂದು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಪಕ್ಷವು ಪ್ರಾದೇಶಿಕ, ಜಾತಿ ಮತ್ತು ಸಾಮಾಜಿಕ ಸಮೀಕರಣಗಳ ಮೂಲಕ ಸಂಪುಟವನ್ನು ಸಮತೋಲನಗೊಳಿಸಲು ಮುಂದಾಗಿದೆ. ಜೊತೆಗೆ ಉಪಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದ ನಿರ್ಣಾಯಕ ರಚನಾತ್ಮಕ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಪಕ್ಷದ ಹಿರಿಯ ನಾಯಕರ ಮತ್ತು ಶಾಸಕರು ಪ್ರಕಾರ, ಸಚಿವ ಸ್ಥಾನಕ್ಕೆ ಪಕ್ಷದೊಳಗೆ ನಾಯಕರ ನಡುವೆ ಏರ್ಪಟ್ಟಿರುವ ಸ್ಪರ್ಧೆಯನ್ನು ಸರಾಗವಾಗಿ ನಿರ್ವಹಿಸಲು ಸಂಪುಟ ವಿಸ್ತರಣೆಯನ್ನು ಎರಡು ಕಂತುಗಳಲ್ಲಿ ಕೈಗೊಳ್ಳುವ ನಿರೀಕ್ಷೆಯಿದೆ.
ಹಾಗೂ ಶಿವಕುಮಾರ್ ಸಿಎಂ ಆಗುತ್ತಿದ್ದು, ಸರ್ಕಾರ ಮತ್ತು ಪಕ್ಷದ ನಡುವಿನ ಸಮಾರಸ್ಯ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಅಧ್ಯಕ್ಷರ ಆಯ್ಕೆಗೆ ಒಬಿಸಿ ಅಭ್ಯರ್ಥಿಯ ಹುಡುಕಾಟಕ್ಕೆ ಹೈಕಮಾಂಡ್ ಮುಂದಾಗಿದೆ. ಸಚಿವ ಸಂಪುಟ ರಚನೆ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದ್ದು, ಪಕ್ಷದ ಉನ್ನತ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಶಾಸಕ ಎ.ಆರ್. ಕೃಷ್ಣಮೂರ್ತಿ ಎಎನ್ಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಎಲ್ಲವೂ ತುಂಬಾ ಸುಗಮವಾಗಿ ನಡೆಯುತ್ತಿದೆ. ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸಿದಾಗ ನಿರ್ಗಮಿತ ಸಿಎಂ ಮತ್ತು ಹೊಸ ಸಿಎಂ ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ಮುಂದೆ ಮಂಡಿಸುತ್ತಾರೆ. ಸುಮಾರು 15 ಸದಸ್ಯರನ್ನು ಮೊದಲ ಕಂತಿನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಮತ್ತು ಉಳಿದವರನ್ನು ಪರಿಷತ್ತು ಮತ್ತು ರಾಜ್ಯಸಭಾ ಚುನಾವಣೆಯ ನಂತರ ಸೇರಿಸಿಕೊಳ್ಳಲಾಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ. ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಪಕ್ಷದ ನಾಯಕತ್ವ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಜಾರ್ಜ್ ಹೇಳಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಪಾಲಿಸುತ್ತೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ಉನ್ನತ ಮಟ್ಟದ ಚರ್ಚೆಗಳು ಮುಗಿದ ನಂತರ ಅಂತಿಮ ಸಂಪುಟ ರಚನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂಬುದ್ದಾಗಿದೆ.

















