ಬೆಂಗಳೂರು (ಜೂನ್ 02): ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದ ವೇಳೆ ಅಕ್ರಮ ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ಗೆ ಲಗಾಮು ಹಾಕಲು ಕರ್ನಾಟಕ ಪೊಲೀಸರು ಮತ್ತು ಸೈಬರ್ ಕ್ರೈಮ್ ವಿಭಾಗದ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಐಪಿಎಲ್ ಕ್ರಿಕೆಟ್ ಜೂಜಾಟವನ್ನು ಗುರಿಯಾಗಿಸಿಕೊಂಡು ದೇಶಾದ್ಯಂತ ಸಕ್ರಿಯವಾಗಿದ್ದ ಸುಮಾರು 8,750ಕ್ಕೂ ಹೆಚ್ಚು ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳು ಹಾಗೂ ಲಿಂಕ್ಗಳನ್ನು ಯಶಸ್ವಿಯಾಗಿ ಬ್ಲಾಕ್ ಮಾಡಲಾಗಿದ್ದು ಐಪಿಎಲ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುವ ಸಾಧ್ಯತೆ ಇರುವುದನ್ನು ಮನಗಂಡಿದ್ದ ಸೈಬರ್ ಕ್ರೈಮ್ ವಿಭಾಗದ ಸಿಐಡಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರು ಎನ್ನಲಾಗುತ್ತಿದೆ.
ಸಾರ್ವಜನಿಕರನ್ನು ಸುಲಭವಾಗಿ ಹಣ ಗಳಿಸುವ ಆಮಿಷಕ್ಕೆ ಒಡ್ಡಿ ಹಣ ದೋಚುತ್ತಿದ್ದ ಸಾವಿರಾರು ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳನ್ನು ತಾಂತ್ರಿಕ ವಿಶ್ಲೇಷಣೆಯ ಮೂಲಕ ಪತ್ತೆ ಹಚ್ಚಲಾಗಿದೆ. ಕರ್ನಾಟಕ ಪೊಲೀಸರ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಅಕ್ರಮ ವೆಬ್ಸೈಟ್ಗಳನ್ನು ದೇಶಾದ್ಯಂತ ನಿಷೇಧಿಸಲು ತಕ್ಷಣದ ಆದೇಶ ಹೊರಡಿಸಿದೆ. ಹಾಗೂ ಅನಧಿಕೃತ ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ವೆಬ್ಸೈಟ್ಗಳು ಕೇವಲ ಹಣದ ನಷ್ಟವನ್ನು ಮಾತ್ರ ಉಂಟುಮಾಡುವುದಿಲ್ಲ, ಬದಲಿಗೆ ಬಳಕೆದಾರರ ಬ್ಯಾಂಕಿಂಗ್ ವಿವರಗಳು ಹಾಗೂ ವೈಯಕ್ತಿಕ ಡೇಟಾವನ್ನು ಕದಿಯುವ ಸೈಬರ್ ವಂಚನೆಗಳಿಗೂ ದಾರಿಯಾಗುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಆಪ್ಗಳ ಮೋಡಿಗೆ ಬಲಿಯಾಗಿ ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಹಣ ಹೂಡಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಇಂತಹ ಸೈಬರ್ ಅಪರಾಧಗಳ ವಿರುದ್ಧ ನಮ್ಮ ತನಿಖೆ ಮತ್ತು ಕ್ರಾಕ್ಡೌನ್ ಕಾರ್ಯಾಚರಣೆ ಮುಂದೆಯೂ ಮುಂದುವರಿಯಲಿದೆ ಎಂದು ಕರ್ನಾಟಕ ಸೈಬರ್ ಪೊಲೀಸ್ ವಿಭಾಗ ಎಚ್ಚರಿಸಿದೆ ಎಂದು ಮಾಹಿತಿ ನೀಡಿದೆ.
















