ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಇತ್ತೀಚಿಗೆ ಪಕ್ಷದಿಂದ ಹೊರಹಾಕಿದ ನಾಯಕ ರಿತಬ್ರತಾ ಬ್ಯಾನರ್ಜಿ, ಶಾಸಕರ ಬೆಂಬಲದ ಸಹಿ ಪತ್ರದೊಂದಿಗೆ ವಿಧಾನಸಭೆಗೆ ಆಗಮಿಸಿದ್ದು, ಇದು ಪಕ್ಷದ ಇಬ್ಬಾಗದ ಊಹಾಪೋಹಕ್ಕೆ ಕಾರಣವಾಗಿದ್ದು ಮೂಲಗಳ ಪ್ರಕಾರ, ವಿರೋಧ ಪಕ್ಷದ ಪಾಳಯದೊಳಗಿನ ಈ ದಂಗೆ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ಕಾರಣವಾಗಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೂನ್ 1ರಂದು ಉಲುಬೇರಿಯಾ ಪೂರ್ವದ ಶಾಸಕ ರಿತಬ್ರತ ಬ್ಯಾನರ್ಜಿ ಮತ್ತು ಎಂಟಲಿ ಶಾಸಕ ಸಂದೀಪನ್ ಸಹಾ ಅವರನ್ನು ಟಿಎಂಸಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಇದರ ಕುರಿತು ಈ ಇಬ್ಬರು ನಾಯಕರು ಉನ್ನತ ನಾಯಕತ್ವದ ನಿರ್ದೇಶನಗಳನ್ನು ಧಿಕ್ಕರಿಸಿ ಪಕ್ಷದ ಹಿತಾಸಕ್ತಿಗಳಿಗೆ ಹಾನಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ಘೋಷಿಸಿತ್ತು. ತಕ್ಷಣಕ್ಕೆ ಇಬ್ಬರು ನಾಯಕರನ್ನು ಪಕ್ಷದ ಎಲ್ಲ ಹುದ್ದೆ ಮತ್ತು ಜವಾಬ್ದಾರಿಗಳಿಂದ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಇದೀಗ ರಿತಬ್ರತಾ ಬ್ಯಾನರ್ಜಿ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಪಕ್ಷದ ಹಲವು ಶಾಸಕರು ಅವರಿಗೆ ಬೆಂಬಲ ಸೂಚಿಸಿದ್ದು, ಅವರ ಈ ನಡೆಯನ್ನು ರಾಜಕೀಯ ವಲಯದಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಇಂದು ವಿಧಾನಸಭೆಯಲ್ಲಿ ಹಠಾತ್ ಮತ್ತು ಅನಿರೀಕ್ಷಿತವಾಗಿ ಕಾಣಿಸಿಕೊಂಡ ರಿತಬ್ರತಾ ಅವರ ಹಿಂದೆ ನಿಷ್ಠಾವಂತ ಶಾಸಕರ ಗುಂಪಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮೂಲಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ನೊಳಗೆ ಬಂಡಾಯ ಗುಂಪು ರೂಪುಗೊಂಡಿದೆ. ಸದ್ಯ ಸುಮಾರು 59 ಶಾಸಕರು ಈ ಗುಂಪಿನೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದ್ದು ಈ ಬಂಡಾಯ ಶಾಸಕರ ಹೆಸರುಗಳು ಇನ್ನೂ ಸಾರ್ವಜನಿಕವಾಗಿ ಬಹಿರಂಗಗೊಂಡಿಲ್ಲ.

ಉಚ್ಚಾಟಿತ ಶಾಸಕ ರಿತಬ್ರತಾ ವಿಧಾನಸಭೆಯಲ್ಲಿ ಯಾರನ್ನು ಭೇಟಿಯಾದರು, ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಯಾವುದೇ ವಿವರಗಳನ್ನು ನೀಡಿಲ್ಲ. ರಿತಬ್ರತಾ ಜೊತೆಗೆ ಎಂಟಲ್ಲಿ ಶಾಸಕ ಸಂದೀಪನ್ ಸಹಾ ಅವರ ಪಾತ್ರವೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಕಲಿ ಸಹಿ ವಿವಾದದಲ್ಲಿ ಸಿಲುಕಿಕೊಂಡ ಬಳಿಕ ಅವರ ವಿರುದ್ಧ ಟಿಎಂಸಿ ಶಿಸ್ತು ಕ್ರಮ ಕೈಗೊಂಡಿತ್ತು. ಆದರಿಂದ ಈ ಕುರಿತು ಟಿಎಂಸಿ ಉನ್ನತ ನಾಯಕತ್ವ ಯಾವುದೇ ಔಪಚಾರಿಕ ಹೇಳಿಕೆ ನೀಡಿಲ್ಲ. ಆದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ಹಿರಿಯ ನಾಯಕರು ಈಗಾಗಲೇ ಹಲವಾರು ಚರ್ಚೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಬಹಿರಂಗಪಡಿಸಿವೆ. ಟಿಎಂಸಿ ಮೂಲಗಳ ಪ್ರಕಾರ, ಬಂಡಾಯ ಶಾಸಕರೊಂದಿಗೆ ವಿವೇಚನಾಯುಕ್ತ ಮಾರ್ಗಗಳ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
















