ಚಿಕ್ಕಮಗಳೂರು: ನೂತನ ಮುಖ್ಯಮಂತ್ರಿಗೆ ಅಗಾಧವಾದ ರಾಜಕೀಯ ಅನುಭವ ಮತ್ತು ಕಾರ್ಯಕ್ಷಮತೆಯ ಹುಮ್ಮಸ್ಸು ಎರಡೂ ಇದೆ. ಆದರೆ ಸದ್ಯಕ್ಕೆ ಅವರಿಗೆ ಬೇಕಿರುವುದು ದೃಢವಾದ ಇಚ್ಛಾಶಕ್ತಿ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಶ್ಲೇಷಿಸಿದ್ದಾರೆ. ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ. ಟಿ. ರವಿ ಅವರು ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ಶೈಲಿಯಲ್ಲಿ ಅಭಿನಂದನೆ ಸಲ್ಲಿಸುತ್ತಲೇ ನೇರವಾಗಿ ಕೆಲ ವಿಚಾರಗಳ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

ಈ ಕುರಿತು “ನೂತನ ಮುಖ್ಯಮಂತ್ರಿಗಳಿಗೆ ಅಗಾಧವಾದ ರಾಜಕೀಯ ಅನುಭವ ಮತ್ತು ಕಾರ್ಯ ಕ್ಷಮತೆಯ ಹುಮ್ಮಸ್ಸು ಎರಡೂ ಇದೆ, ಆದರೆ ಸದ್ಯಕ್ಕೆ ಅವರಿಗೆ ಬೇಕಿರುವುದು ದೃಢವಾದ ಇಚ್ಛಾಶಕ್ತಿ ಮಾತ್ರ. ವೈಯಕ್ತಿಕ ರಾಜಕಾರಣ, ಸ್ವಂತ ಹಿತಾಸಕ್ತಿ ಹಾಗೂ ಪಕ್ಷದ ಅಜೆಂಡಾಗಳನ್ನು ಬದಿಗಿಟ್ಟು ಕೇವಲ ರಾಜ್ಯದ ಹಿತವನ್ನೇ ಪರಮ ಆದ್ಯತೆಯನ್ನಾಗಿ ಸ್ವೀಕರಿಸಿದರೆ ಮಾತ್ರ ಅವರಿಂದ ಜನಪರ ಕೆಲಸಗಳು ಸಾಧ್ಯ. ಇಲ್ಲದಿದ್ದರೆ ಸಾರ್ವಜನಿಕರಲ್ಲಿ ಯಾವುದೇ ನಿರೀಕ್ಷೆಗಳು ಉಳಿಯುವುದಿಲ್ಲ” ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ. “ಮುಖ್ಯಮಂತ್ರಿಯವರ ಪ್ರತಿಯೊಂದು ನಿರ್ಧಾರವೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರಬೇಕು” ಎಂದು ಆಶಿಸಿರುವ ಅವರು,

“ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ದೂರದೃಷ್ಟಿಯ ಯೋಜನೆಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಮತ್ತು ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಸಾಮಾಜಿಕ ಅನ್ಯಾಯಕ್ಕೆ ಆಸ್ಪದ ನೀಡಬಾರದು” ಎಂದು ಒತ್ತಾಯಿಸಿದ್ದಾರೆ. ರಾಜಕೀಯ ಲಾಭಗಳು ಯಾವತ್ತೂ ನಾಡಿನ ಹಿತವನ್ನು ಮೀರಬಾರದು ಎಂಬುದು ಸಿಟಿ ರವಿ ಅವರ ಸ್ಪಷ್ಟ ನಿಲುವಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ. ರವಿ ಅವರು, “ಹಳೆಯ ಧೋರಣೆಗಳನ್ನು ಬದಲಾಯಿಸಿಕೊಳ್ಳದಿದ್ದರೆ ದೇಶ ಮತ್ತು ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ಹೀಗೆಯೇ ಮುಂದುವರಿಯುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. “ಕೇವಲ ಹಣವೇ ಪ್ರಧಾನವಾದಾಗ ಆಡಳಿತದ ಹಿಡಿತ ಸಡಿಲಗೊಳ್ಳುವುದು ಸಹಜ, ಆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿ ನೂತನ ಮುಖ್ಯಮಂತ್ರಿಗಳು ಜನರ ಮನ್ನಣೆ ಗಳಿಸಲಿ” ಎಂದು ಅವರು ಇದೇ ಸಂದರ್ಭದಲ್ಲಿ ಶುಭಾಶಯ ಕೋರಿದರು ಎಂಬುದ್ದಾಗಿದೆ.
















