ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರ ಹೊಸ ಮಂತ್ರಿಮಂಡಲವನ್ನು ಹೈಕಮಾಂಡ್ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿ ಅಳೆದು ತೂಗಿ ಅಂತಿಮಗೊಳಿಸಲಾಗಿದೆ. ರಾಜ್ಯಪಾಲರಿಗೆ ಈಗಾಗಲೇ ಕಳುಹಿಸಿರುವ ಮಂತ್ರಿಮಂಡಲ ಸದಸ್ಯರ ಪ್ರಮಾಣವಚನ ಪಟ್ಟಿ ಪ್ರಕಾರ ಹೊಸ ಕ್ಯಾಬಿನೆಟ್ನಲ್ಲಿ 13 ಜನ ಶಾಸಕರು ಡಿ.ಕೆ.ಶಿವಕುಮಾರ್ ಜೊತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಶೇಷವೆಂದರೆ ಈ ಹದಿನಾಲ್ಕು ಜನರ ಇಡೀ ಮಂತ್ರಿಮಂಡಲದಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. ಪ್ರಮಾಣ ವಚನ ಸ್ವೀಕಾರ ಮಾಡುವವರೆಲ್ಲರೂ ಪುರುಷರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಟ್ಟು 8 ಜನ ಮಹಿಳಾ ಶಾಸಕರಿದ್ದರೂ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಯಾವ ಮಹಿಳಾ ಶಾಸಕರಿಗೂ ಅವಕಾಶ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದ್ದರೂ ಲೋಕಭವನಕ್ಕೆ ಕಳುಹಿಸಲಾದ ಸಚಿವರ ಪ್ರಮಾಣ ವಚನ ಸ್ವೀಕಾರ ಮಾಡುವ ಶಾಸಕರುಗಳ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ಗೆ ಸದ್ಯದಲ್ಲಿಯೇ ನಡೆಯುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಮಹಿಳೆಯರ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಮುಖಂಡರಾಗಿರುವ ಕೆ.ಹೆಚ್.ಮುನಿಯಪ್ಪನವರ ಪುತ್ರಿ ರೂಪಕಲಾ ಶಶಿಧರ್, ಹಿರಿಯ ನಾಯಕಿ ಮೋಟಮ್ಮನವರ ಪುತ್ರಿ ನಯನಾ ಮೋಟಮ್ಮ ಮತ್ತು ಕನೀಜ್ ಫಾತೀಮಾ ಇದ್ದಾರೆ. ಇದಲ್ಲದೆ ವಿಧಾನ ಪರಿಷತ್ ಸದಸ್ಯೆಯಾಗಿ ಚಿತ್ರನಟಿ ಉಮಾಶ್ರೀ, ಡಾ.ಆರತಿ ಕೃಷ್ಣ, ಬಲ್ಕೀಸ್ ಬಾನು, ಪಕ್ಷೇತರ ಶಾಸಕಿಯಾಗಿ ಗೆದ್ದು ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರಿ ಶ್ರೀಮತಿ ಲತಾ ಮಲ್ಲಿಕಾರ್ಜುನ್ ಸಹ ಇದ್ದಾರೆ.

ಸಚಿವರಾಗಲು ಮುನಿಯಪ್ಪನವರ ಪುತ್ರಿಯಾದ ರೂಪಕಲಾ ಶಶಿಧರ್ ಅವರು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಅಂತಿಮವಾಗಿ ಕೆ.ಹೆಚ್.ಮುನಿಯಪ್ಪನವರಿಗೇ ಮತ್ತೆ ಸಚಿವರಾಗುವ ಅವಕಾಶ ಸಿಕ್ಕಿದ್ದರಿಂದ ರೂಪಕಲಾ ಅವರಿಗೆ ಮಂತ್ರಿ ಭಾಗ್ಯ ದೊರೆಯುವುದು ಕಷ್ಟವಾಗಿದೆ. ನಯನ ಮೋಟಮ್ಮ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಮೊದಲ ಬಾರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದಿಲ್ಲ ಎನ್ನು ಪಕ್ಷದ ನಿಯಮ ನಯನಾ ಮೋಟಮ್ಮನವರಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತರಲಾದ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳಾ ಕೇಂದ್ರಿತ ಯೋಜನೆಗಳೆ ಆಗಿವೆ. ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ”ಗೃಹಲಕ್ಷ್ಮಿ” ಗ್ಯಾರಂಟಿ ಯೋಜನೆ ಮತ್ತು ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ”ಶಕ್ತಿ” ಗ್ಯಾರಂಟಿ ಯೋಜನೆ ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಕಾರ್ಯಕ್ರಮಗಲಾಗಿವೆ. ಆದರೆ ಡಿಕೆಶಿ ನೇತೃತ್ವದ 13 ಜನ ಸಚಿವರ ಹೊಸ ಮಂತ್ರಿಮಂಡಲದಲ್ಲಿ 8 ಜನ ಶಾಸಕರಿರುವರಲ್ಲಿ ಯಾವ ಮಹಿಳಾ ಶಾಸಕರಿಗೂ ಮಂತ್ರಿಯಾಗುವ ಸೌಭಾಗ್ಯ ದೊರೆಯದಿರುವುದು ಮಹಿಳಾ ಶಾಸಕರಲ್ಲಿ ನಿರಾಶೆ ಮೂಡಿಸಿರುವುದಂತೂ ಸುಳ್ಳಲ್ಲ ಎಂಬುದ್ದಾಗಿದೆ.
















