ಮನೆ ಸುದ್ದಿ ಜಾಲ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿಯಿಂದ ವಿಧಾನಸೌಧದ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ

ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿಯಿಂದ ವಿಧಾನಸೌಧದ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ

0

ಬೆಂಗಳೂರು (ಜೂ.3): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲಿಯೇ ವಿಧಾನಸೌಧದಲ್ಲಿ ಭಕ್ತಿ ಹಾಗೂ ಧಾರ್ಮಿಕ ವಾತಾವರಣ ಮನೆಮಾಡಿದೆ. ನೂತನ ಸಿಎಂ ಕಚೇರಿ ಪ್ರವೇಶಿಸುವುದಕ್ಕೂ ಮುನ್ನ ಅವರ ಆರಾಧ್ಯ ದೈವ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ (ಅಜ್ಜಯ್ಯ) ಅವರು ವಿಧಾನಸೌಧಕ್ಕೆ ಆಗಮಿಸಿ ವಿಶೇಷ ಪೂಜೆಗಳನ್ನು ನೆರವೇರಿಸಿದ್ದಾರೆ ಎಂಬುದ್ದಾಗಿದೆ.

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಒಳಪ್ರವೇಶಿಸಿದ ನೊಣವಿನಕೆರೆ ಸ್ವಾಮೀಜಿ ಅಜ್ಜಯ್ಯ ಅವರು, ಪ್ರವೇಶದ್ವಾರದ ಬಳಿ ಅಕ್ಷತೆಯನ್ನು ಪ್ರೋಕ್ಷಣೆ ಮಾಡಿ ಮಂಗಳ ಮುಹೂರ್ತದಲ್ಲಿ ಸೌಧದ ಒಳಗಡೆ ಹೆಜ್ಜೆ ಇಟ್ಟರು. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಅಜ್ಜಯ್ಯ ಅವರ ಆಗಮನವಾಗಿದ್ದು, ಕಚೇರಿಯ ಶುದ್ಧೀಕರಣ ಹಾಗೂ ಧಾರ್ಮಿಕ ಕಾರ್ಯಗಳು ಜರುಗಿದವು ಎನ್ನಲಾಗುತ್ತಿದೆ.

ಹಾಗೂ ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಲ್ಲಿ ನೂತನ ಸಿಎಂ ಕುಳಿತುಕೊಳ್ಳುವ ಕುರ್ಚಿಗೆ ಸ್ವಾಮೀಜಿಯವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಸಕಲ ವಿಧಿವಿಧಾನಗಳನ್ನು ಪೂರೈಸಿದರು. ಸಿಎಂ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು, ನೂತನ ಮುಖ್ಯಮಂತ್ರಿಗಳ ಮುಂದಿನ ಆಡಳಿತಾವಧಿ ಸುಗಮವಾಗಿ ಸಾಗಲಿ ಎಂದು ವಿಶೇಷ ಸಂಕಲ್ಪ ನೆರವೇರಿಸಿದರು. ಕೆಲವೇ ಕ್ಷಣಗಳಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಿ, ಅಜ್ಜಯ್ಯನವರ ಆಶೀರ್ವಾದ ಪಡೆದು ಅಧಿಕೃತವಾಗಿ ತಮ್ಮ ಮುಖ್ಯಮಂತ್ರಿ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.