ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮದ ಬಳಿಕ ಮಧ್ಯಪ್ರದೇಶ ಲೀಗ್ (ಎಂಪಿಎಲ್) ನಲ್ಲಿ ಕಣಕ್ಕಿಳಿದ ನಾಯಕ ರಜತ್ ಪಾಟಿದಾರ್ ಅವರಿಗೆ ಮೊದಲ ಪಂದ್ಯದಲ್ಲೇ ನಿರಾಸೆ ಎದುರಾಗಿದೆ. ಪಾಟಿದಾರ್ ನೇತೃತ್ವದ ಗ್ವಾಲಿಯರ್ ಚೀತಾಸ್ ತಂಡ, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ 92 ರನ್ ಗಳ ಭಾರೀ ಅಂತರದಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಪಾಟಿದಾರ್ ಕೇವಲ 11 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ ಮಾಧವ್ ತಿವಾರಿ ಅಜೇಯ 62 ರನ್ ಸಿಡಿಸಿ ಉಜ್ಜಯಿನಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಕೇವಲ ನಾಲ್ಕು ದಿನಗಳ ಬಳಿಕ ರಜತ್ ಪಾಟಿದಾರ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿದಿದ್ದರು. ಮಧ್ಯಪ್ರದೇಶ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಹೋಳ್ಕರ್ ಕ್ರೀಡಾಂಗಣದಲ್ಲಿ ಗ್ವಾಲಿಯರ್ ಚೀತಾಸ್ ತಂಡವನ್ನು ಮುನ್ನಡೆಸಿದ ಅವರು, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದರು.

ಟಾಸ್ ಗೆದ್ದ ಗ್ವಾಲಿಯರ್ ಚೀತಾಸ್ ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ನಿರ್ಧಾರ ತಂಡಕ್ಕೆ ಫಲ ನೀಡಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಉಜ್ಜಯಿನಿ ಫಾಲ್ಕನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಆರಂಭಿಕ ಬ್ಯಾಟರ್ ಗಳಾದ ಚಂಚಲ್ ರಾಥೋಡ್ ಮತ್ತು ಯಶ್ ದುಬೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನ ಅಬ್ಬರ
ಉಜ್ಜಯಿನಿ ಫಾಲ್ಕನ್ಸ್ ತಂಡದ ಭಾರೀ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನ ಯುವ ಆಲ್ ರೌಂಡರ್ ಮಾಧವ್ ತಿವಾರಿ ಪ್ರಮುಖ ಕಾರಣರಾದರು. ಇತ್ತೀಚಿನ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ 22 ವರ್ಷದ ತಿವಾರಿ, ಗ್ವಾಲಿಯರ್ ಬೌಲರ್ ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟು 31 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಗಳ ನೆರವಿನಿಂದ ಅಜೇಯ 62 ರನ್ ಗಳಿಸಿದರು. ಅವರ ಸ್ಫೋಟಕ ಆಟದಿಂದ ತಂಡದ ಮೊತ್ತ 220 ರನ್ ಗಳ ಗಡಿ ದಾಟಿತು.

ಕೇವಲ 11 ರನ್ ಗೆ ವಿಕೆಟ್ ಒಪ್ಪಿಸಿದ ಪಾಟಿದಾರ್
222 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗ್ವಾಲಿಯರ್ ಚೀತಾಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಬ್ಯಾಟಿಂಗ್ ಗೆ ಬಂದ ನಾಯಕ ರಜತ್ ಪಾಟಿದಾರ್ ಕೇವಲ 11 ರನ್ ಗಳಿಸಿ ಔಟಾದರು.
ಗ್ವಾಲಿಯರ್ ಪರ ಸ್ಥಳೀಯ ಆಟಗಾರ ಪಾರ್ಥ್ ಚೌಧರಿ ಒಂಟಿ ಹೋರಾಟ ನಡೆಸಿದರು. ಅವರು ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 46 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟರ್ ಗಳಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ಗ್ವಾಲಿಯರ್ ಚೀತಾಸ್ ತಂಡ 14.2 ಓವರ್ ಗಳಲ್ಲಿ 129 ರನ್ ಗಳಿಗೆ ಆಲೌಟ್ ಆಯಿತು.
ಉಜ್ಜಯಿನಿ ಫಾಲ್ಕನ್ಸ್ ಪರ ಆಯುಷ್ ಮಂಕರ್ ಮೂರು ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಉಜ್ಜಯಿನಿ ತಂಡ ಎಂಪಿಎಲ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ.













