ದಿವಂಗತ ನಟ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದಿಲೀಪ್ ರಾಜ್ ನಿಧನರಾಗಿ ಕೆಲ ದಿನಗಳೇ ಕಳೆದಿದ್ದರೂ, ಅವರ ಕುಟುಂಬ ಇನ್ನೂ ಆ ನೋವಿನಿಂದ ಹೊರಬಂದಿಲ್ಲ. 25 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜೋಡಿ ಅಭಿಮಾನಿಗಳ ಮೆಚ್ಚಿನ ದಂಪತಿಗಳಾಗಿದ್ದರು. ಅಗಲಿದ ಪತಿಯ ಜೊತೆಗೆ ಕಳೆದ ಕ್ಷಣಗಳ ನೆನಪನ್ನು ಸರಣಿ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳುತ್ತಿರುವ ಶ್ರೀವಿದ್ಯಾ, ಈ ಬಾರಿ ದೇವರನ್ನೇ ಪ್ರಶ್ನಿಸುವ ರೀತಿಯಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ – ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು. ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು.
ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ- ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿದೆ. ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಎಂದು ಬರೆದಿದ್ದಾರೆ. ಇದೇ ವೇಳೆ, ಹಿಟ್ಲರ್ ಕಲ್ಯಾಣ ಧಾರಾವಾಹಿಯೊಂದರ ದೃಶ್ಯವನ್ನು ಹಂಚಿಕೊಂಡಿರುವ ಶ್ರೀವಿದ್ಯಾ, ಪತಿಯ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ದಿಲೀಪ್ ರಾಜ್ ಅವರ ನಗು ಮತ್ತು ಸ್ಟೈಲ್ ನೋಡಿ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.

















