ಮನೆ ಮನರಂಜನೆ ಡಿವೋರ್ಸ್ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

ಡಿವೋರ್ಸ್ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

0

ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ‘ಬಿಗ್ ಬಾಸ್’ ಖ್ಯಾತಿಯ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವ ಸುದ್ದಿ ಹೊರಬಿದ್ದಿದೆ. ಮದುವೆಯಾದ ನಾಲ್ಕೇ ವರ್ಷಕ್ಕೆ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದಾ ಸಂತೋಷದಿಂದ ಜೀವನ ಸಾಗಿಸುತ್ತಿದ್ದ ಈ ಜೋಡಿಯ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

‘ಮೊಗ್ಗಿನ ಮನಸು’ ಸೇರಿದಂತೆ ಹಲವು ಕನ್ನಡ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಶುಭಾ ಪೂಂಜಾ, ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೆ, ಇದೀಗ ಏಕಾಏಕಿ ವಿಚ್ಛೇದನದ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ.

ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ಕೋರಿ ಫ್ಯಾಮಿಲಿ ಕೋರ್ಟ್ ಗೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಲಾಗಿದ್ದು, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಆದರೆ, ವಿಚ್ಛೇದನಕ್ಕೆ ಕಾರಣವೇನು ಎಂಬ ಬಗ್ಗೆ ಸುಮಂತ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇದೇ ವೇಳೆ ಶುಭಾ ಪೂಂಜಾ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಪತಿ ಜೊತೆಗೆ ಇರುವ ಫೋಟೋಗಳನ್ನು ಅಳಿಸಿರುವುದು ಗಮನ ಸೆಳೆದಿದೆ.

‘ಬಿಗ್ ಬಾಸ್’ ಮೂಲಕ ಮತ್ತಷ್ಟು ಜನಪ್ರಿಯತೆ

ಸಿನಿಮಾಗಳ ಜೊತೆಗೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಶುಭಾ ಪೂಂಜಾ ತಮ್ಮ ಸರಳ ಹಾಗೂ ಚುರುಕಿನ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಸದಾ ನಗುಮುಖದಿಂದ ಕಾಣಿಸಿಕೊಳ್ಳುತ್ತಿದ್ದ ಅವರ ವೈವಾಹಿಕ ಜೀವನದಲ್ಲಿ ಈ ಬೆಳವಣಿಗೆ ನಡೆದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.