ಮನೆ ಸುದ್ದಿ ಜಾಲ ಕೂಡ್ಲಿಗಿಯಲ್ಲಿ ಜಪಾನ್ ಶೈಲಿಯ ‘ಮಿಯಾವಾಕಿ’ ದಟ್ಟ ಅರಣ್ಯ ನಿರ್ಮಾಣ: ಜೂನ್ 5ರಂದು ಸಚಿವೆ ನಿರ್ಮಲಾ ಸೀತಾರಾಮನ್...

ಕೂಡ್ಲಿಗಿಯಲ್ಲಿ ಜಪಾನ್ ಶೈಲಿಯ ‘ಮಿಯಾವಾಕಿ’ ದಟ್ಟ ಅರಣ್ಯ ನಿರ್ಮಾಣ: ಜೂನ್ 5ರಂದು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

0

ಹೊಸಪೇಟೆ: ರಾಜ್ಯದಲ್ಲೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಜಪಾನ್ ಶೈಲಿಯ ‘ಮಿಯಾವಾಕಿ’ ಮಾದರಿಯ ದಟ್ಟ ಅರಣ್ಯ ನಿರ್ಮಾಣ ಯೋಜನೆಗೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಚಾಲನೆ ದೊರೆಯುತ್ತಿದೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಈ ಮಹತ್ವಾಕಾಂಕ್ಷೆಯ ಪರಿಸರ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ಮಿಯಾವಾಕಿ ವಿಧಾನದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಯೋಜನೆ ಹೊಂದಿದೆ. ಕಡಿಮೆ ಜಾಗದಲ್ಲಿ ಕಡಿಮೆ ಅವಧಿಯಲ್ಲೇ ದಟ್ಟ ಅರಣ್ಯವನ್ನು ಬೆಳೆಸುವ ಜಪಾನ್ ಮೂಲದ ಮಿಯಾವಾಕಿ ತಂತ್ರಜ್ಞಾನವನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ಯೋಜನೆಯ ಮೊದಲ ಹಂತದಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸುಮಾರು 15 ಸಾವಿರ ಸಸಿಗಳನ್ನು ನೆಡಲಾಗುತ್ತದೆ. ಇದಕ್ಕಾಗಿ ಭೂಮಿ ಸ್ವಚ್ಛಗೊಳಿಸುವುದು ಮತ್ತು ಗುಂಡಿ ತೋಡುವ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದೆ.

ಕೂಡ್ಲಿಗಿ ತಾಲೂಕಿನಲ್ಲಿರುವ ಬಂಜರು ಹಾಗೂ ಬಳಕೆಯಾಗದ ಭೂಮಿಯನ್ನು ಹಸಿರುಮಯಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರಿ ಜಮೀನುಗಳ ಜೊತೆಗೆ ಆಸಕ್ತ ರೈತರ ಖಾಸಗಿ ಜಮೀನುಗಳಲ್ಲಿಯೂ ಮಿಯಾವಾಕಿ ಮಾದರಿಯ ಅರಣ್ಯ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಯೋಜನೆಯಡಿ ಹುಣಸೆ, ಸೇಬು, ನೆಲ್ಲಿಕಾಯಿ, ನೇರಳೆ, ನಿಂಬೆ ಸೇರಿದಂತೆ ವಿವಿಧ ಸ್ಥಳೀಯ ಜಾತಿಯ ಸಸಿಗಳು ಹಾಗೂ ಬೇವು ಮತ್ತು ಹೊಂಗೆ ಮರಗಳನ್ನು ನೆಡಲಾಗುತ್ತದೆ. ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ಪರಿಸರ ಸಮತೋಲನ ಕಾಪಾಡುವ ಮರಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಈ ಕುರಿತು ಮಾತನಾಡಿದ ಕೂಡ್ಲಿಗಿ ಶಾಸಕ ಎನ್. ಟಿ. ಶ್ರೀನಿವಾಸ್, ಮಿಯಾವಾಕಿ ಅರಣ್ಯ ಕೃಷಿ ಮಾದರಿಯು ಮಳೆ ಆಧಾರಿತ ಪ್ರದೇಶವಾಗಿರುವ ಕೂಡ್ಲಿಗಿಯಲ್ಲಿ ಹಸಿರು ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬಳಕೆಯಾಗದ ಜಮೀನುಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸುಸ್ಥಿರ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.