ಮನೆ ಸುದ್ದಿ ಜಾಲ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಭದ್ರತಾ ಲೋಪ..? ರೌಡಿ ಶೀಟರ್ ಗ್ಯಾಂಗ್ ಎಣ್ಣೆ ಪಾರ್ಟಿ ಆರೋಪ

ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಭದ್ರತಾ ಲೋಪ..? ರೌಡಿ ಶೀಟರ್ ಗ್ಯಾಂಗ್ ಎಣ್ಣೆ ಪಾರ್ಟಿ ಆರೋಪ

0

ಮೈಸೂರು: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭದ್ರತಾ ಲೋಪ ನಡೆದಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧವಿರುವ ಕಳ್ಳಬೇಟೆ ತಡೆ ಶಿಬಿರದ ಸಮೀಪ ಕೆಲವರು ಮದ್ಯ ಸೇವಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಮಾಹಿತಿಯ ಪ್ರಕಾರ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಹುಲಿಕಟ್ಟೆ ಪ್ರದೇಶದಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಸತೀಶ್ ಹಾಗೂ ಆತನ ಸಹಚರರಾದ ಗಂಗಾಧರ್ ಮತ್ತು ಚೇತನ್ ಪ್ರವೇಶಿಸಿ, ಆಂಟಿ-ಪೋಚಿಂಗ್ ಕ್ಯಾಂಪ್ ಸಮೀಪ ಮದ್ಯ ಸೇವಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಈ ಪ್ರದೇಶವು ವನ್ಯಜೀವಿಗಳ, ವಿಶೇಷವಾಗಿ ಹುಲಿಗಳ ಸಂಚಾರ ಹೆಚ್ಚಿರುವ ಸೂಕ್ಷ್ಮ ವಲಯವೆಂದು ಗುರುತಿಸಲ್ಪಟ್ಟಿದೆ. ಇಂತಹ ಪ್ರದೇಶದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೇಗೆ ಪ್ರವೇಶ ಪಡೆದರು ಎಂಬ ಪ್ರಶ್ನೆಯನ್ನು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಎತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳಲ್ಲಿ ಅರಣ್ಯದೊಳಗೆ ಮೂವರು ಮದ್ಯ ಸೇವಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಇದು ಅಭಯಾರಣ್ಯದ ಭದ್ರತಾ ವ್ಯವಸ್ಥೆ ಹಾಗೂ ಮೇಲ್ವಿಚಾರಣಾ ಕ್ರಮಗಳ ಕುರಿತು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.

ಬಂಡೀಪುರದ ಒಳಭಾಗಕ್ಕೆ ಸಾರ್ವಜನಿಕರ ಪ್ರವೇಶ ಕಟ್ಟುನಿಟ್ಟಾಗಿ ನಿಯಂತ್ರಿತವಾಗಿದ್ದು, ಕಳ್ಳಬೇಟೆ ತಡೆ ಶಿಬಿರಗಳಿಗೆ ಸಾಮಾನ್ಯವಾಗಿ ಅರಣ್ಯ ಇಲಾಖೆಯ ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶ ಅವಕಾಶವಿರುತ್ತದೆ. ಇಂತಹ ಸಂದರ್ಭದಲ್ಲಿ ಹೊರಗಿನ ವ್ಯಕ್ತಿಗಳು ಅಲ್ಲಿಗೆ ತಲುಪಿರುವುದು ತನಿಖೆಗೆ ಒಳಪಡಬೇಕಾದ ವಿಷಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ವೈರಲ್ ಆಗಿರುವ ಫೋಟೋಗಳ ಸತ್ಯಾಸತ್ಯತೆ ಹಾಗೂ ಆರೋಪಗಳ ಬಗ್ಗೆ ಅರಣ್ಯ ಇಲಾಖೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.