ಮನೆ ಸುದ್ದಿ ಜಾಲ Karnataka CET 2026 Toppers: ಕೆಸಿಇಟಿ ಫಲಿತಾಂಶ ಪ್ರಕಟ; ಈ ಬಾರಿಯೂ ಹೆಣ್ಣು ಮಕ್ಕಳದ್ದೇ ಮೇಲುಗೈ!

Karnataka CET 2026 Toppers: ಕೆಸಿಇಟಿ ಫಲಿತಾಂಶ ಪ್ರಕಟ; ಈ ಬಾರಿಯೂ ಹೆಣ್ಣು ಮಕ್ಕಳದ್ದೇ ಮೇಲುಗೈ!

0

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಅಧಿಕೃತವಾಗಿ ಪ್ರಕಟಿಸಿದೆ. ಫಲಿತಾಂಶದ ಜೊತೆಗೆ ಇಂಜಿನಿಯರಿಂಗ್ ಹಾಗೂ ವೆಟರ್ನರಿ ವಿಭಾಗಗಳ ಟಾಪರ್ಸ್ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್‌ಗೆ ರಾಜ್ಯದ ಮೊದಲ ರ‍್ಯಾಂಕ್‌

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಸೃಜನ್ ದ್ವಿತೀಯ ಸ್ಥಾನ ಹಾಗೂ ನಿನಾದ್ ವಿಶಿಷ್ಟ ತೃತೀಯ ಸ್ಥಾನ ಪಡೆದಿದ್ದಾರೆ.

ವೆಟರ್ನರಿ ವಿಭಾಗದಲ್ಲಿ ನಯನ ಗೋಪಿ ಟಾಪರ್

ವೆಟರ್ನರಿ ವಿಭಾಗದಲ್ಲೂ ಬೆಂಗಳೂರಿನ ವಿದ್ಯಾರ್ಥಿನಿಯೇ ಅಗ್ರಸ್ಥಾನ ಪಡೆದಿದ್ದಾರೆ. ಶಿವನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿ ನಯನ ಗೋಪಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ್ದಾರೆ. ಈ ವಿಭಾಗದಲ್ಲಿ ದಾವಣಗೆರೆಯ ಸರ್ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ದ್ವಿತೀಯ ಸ್ಥಾನ ಪಡೆದರೆ, ಆರ್.ವಿ. ಪಿಯು ಕಾಲೇಜಿನ ರಿತಿಕ್ ಕುಮಾರ್ ತೃತೀಯ ರ‍್ಯಾಂಕ್‌ ತಮ್ಮದಾಗಿಸಿಕೊಂಡಿದ್ದಾರೆ.

ಆರ್.ವಿ. ಪಿಯು ಕಾಲೇಜಿನ ಭರ್ಜರಿ ಪ್ರದರ್ಶನ

ಈ ಬಾರಿಯ ಕೆಸಿಇಟಿ ಟಾಪರ್ಸ್ ಪಟ್ಟಿಯಲ್ಲಿ ಬೆಂಗಳೂರಿನ ಜಯನಗರದ ಆರ್.ವಿ. ಪಿಯು ಕಾಲೇಜು ಅತ್ಯುತ್ತಮ ಸಾಧನೆ ಮಾಡಿದೆ. ಇಂಜಿನಿಯರಿಂಗ್ ವಿಭಾಗದ ಟಾಪರ್ ತನಿಷಾ ಕಾರ್ತಿಕ್ ಹಾಗೂ ವೆಟರ್ನರಿ ವಿಭಾಗದ ಮೂರನೇ ರ‍್ಯಾಂಕ್‌ ಪಡೆದ ರಿತಿಕ್ ಕುಮಾರ್ ಇದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಇನ್ನೊಂದೆಡೆ, ದಾವಣಗೆರೆಯ ಸರ್ ಎಂ.ವಿ. ಪಿಯು ಕಾಲೇಜು ಕೂಡ ವೆಟರ್ನರಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್‌ ಪಡೆಯುವ ಮೂಲಕ ಗಮನ ಸೆಳೆದಿದೆ.

ಫಲಿತಾಂಶ ಎಲ್ಲಿ ವೀಕ್ಷಿಸಬಹುದು?

ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ರಿಜಿಸ್ಟರ್ ನಂಬರ್ ನಮೂದಿಸುವ ಮೂಲಕ ಸ್ಕೋರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಧಿಕೃತ ವೆಬ್‌ಸೈಟ್‌ಗಳು:

  • cetonline.karnataka.gov.in/kea/
  • karresults.nic.in