ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ 2026ರ ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ತೆರೆ ಎಳೆದಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭೆ ಟಿಕೆಟ್ ನೀಡದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದಿಂದ ರಾಜ್ಯಸಭೆ ಅಭ್ಯರ್ಥಿಯಾಗಿ ಒಬಿಸಿ ಸಮುದಾಯದ ಮುಖಂಡ ಪ್ರೊ. ಎಂ. ನಾಗರಾಜ ಅವರಿಗೆ ಬಿಜೆಪಿ ಅವಕಾಶ ನೀಡಿದೆ. ಇದೇ ವೇಳೆ, ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಹಿರಿಯ ಹಾಗೂ ನಿಷ್ಠಾವಂತ ನಾಯಕರಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

ಬಿಜೆಪಿಯ ಈ ನಿರ್ಧಾರ ಮೈತ್ರಿ ಪಕ್ಷವಾದ ಜೆಡಿಎಸ್ಗೆ ದೊಡ್ಡ ಆಘಾತ ತಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮರು ಆಯ್ಕೆ ಕುರಿತ ನಿರೀಕ್ಷೆಗಳು ಭಗ್ನಗೊಂಡಿವೆ.
ರಾಜ್ಯಸಭೆ ಟಿಕೆಟ್ಗಾಗಿ ಜೆಡಿಎಸ್ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಹೆಚ್.ಡಿ. ದೇವೇಗೌಡರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಹಿರಿಯ ನಾಯಕತ್ವವನ್ನು ಪರಿಗಣಿಸಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅವರನ್ನು ಮತ್ತೆ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರ ಪಕ್ಷದೊಳಗೆ ಇತ್ತು.
ಆದರೆ, ಬಿಜೆಪಿ ಹೈಕಮಾಂಡ್ ವಯಸ್ಸು ಮತ್ತು ಆರೋಗ್ಯದ ಅಂಶಗಳನ್ನು ಪರಿಗಣಿಸಿ ದೇವೇಗೌಡರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಿದೆ ಎನ್ನಲಾಗಿದೆ. ಮೈತ್ರಿ ಇದ್ದರೂ ಟಿಕೆಟ್ ವಿಚಾರದಲ್ಲಿ ಬಿಜೆಪಿ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದರು. ಇದೀಗ ಬಿಜೆಪಿ ಹೊಸ ಮುಖಕ್ಕೆ ಅವಕಾಶ ನೀಡುವ ಮೂಲಕ ಜೆಡಿಎಸ್ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.

ಇನ್ನೊಂದೆಡೆ, ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರಿಗೂ ನಿರಾಸೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿಗಾಗಿ ಬಿಟ್ಟುಕೊಟ್ಟಿದ್ದ ಸುಮಲತಾ ಅವರ ಹೆಸರು ರಾಜ್ಯಸಭೆ ಅಭ್ಯರ್ಥಿ ಪಟ್ಟಿಯಲ್ಲಿ ಕೇಳಿಬಂದಿತ್ತು. ದೆಹಲಿ ಮಟ್ಟದಲ್ಲೂ ಅವರು ಲಾಬಿ ನಡೆಸಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು.
ಆದರೆ, ಅಂತಿಮವಾಗಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅವರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಮಂಡ್ಯ ಭಾಗದ ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕಾರಣದಲ್ಲಿ ಹೊಸ ಚರ್ಚೆಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದರ ರಾಜಕೀಯ ಪರಿಣಾಮಗಳು ಹೇಗಿರಲಿವೆ ಎಂಬುದು ಕುತೂಹಲ ಮೂಡಿಸಿದೆ.













