ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜನರ ಮೇಲೆ ದೌರ್ಜನ್ಯ, ಬೆದರಿಕೆ ಹಾಗೂ ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಆರೋಪಗಳಿದ್ದ ಟಿಎಂಸಿ ಪಕ್ಷದ ಮುಖಂಡ, ಸ್ವಯಂ ಘೋಷಿತ ‘ಪುಷ್ಪ’ ಜಹಾಂಗೀರ್ ಖಾನ್‌ನನ್ನು ಬಂಗಾಳ ಪೊಲೀಸರು ಇಂದು ನೇಪಾಳ ಗಡಿ ಸಮೀಪದ ಪ್ರದೇಶವೊಂದರಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯ ವೇಳೆ ಐಪಿಎಸ್ ಅಧಿಕಾರಿಗೆ ಸವಾಲು ಹಾಕಿ ಸುದ್ದಿಯಾಗಿದ್ದ ಜಹಾಂಗೀರ್ ಖಾನ್ ದಕ್ಷಿಣ 24 ಪರಗಣದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿದ್ದ. ಈ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ನಡೆದ ಆರೋಪದ ಹಿನ್ನೆಲೆಯಲ್ಲಿ ಮರು ಚುನಾವಣೆ ಘೋಷಿಸಲಾಗಿತ್ತು. ಆದರೆ, ಬಳಿಕ ಈತ ಚುನಾವಣಾ ಕಣದಿಂದ ಹಿಂದೆ ಸರಿದು ಅಂದಿನಿಂದ ತಲೆಮರೆಸಿಕೊಂಡಿದ್ದು ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜಹಾಂಗೀರ್ ಖಾನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

ಇದರ ಕುರಿತು ಆತನ ಸಂಪರ್ಕ ಜಾಲಗಳು, ಹಣಕಾಸು ವ್ಯವಹಾರಗಳು ಮತ್ತು ರಾಜಕೀಯ ಹಾಗೂ ಅಪರಾಧ ವಲಯಗಳೊಂದಿಗಿನ ಸಂಪರ್ಕ ಸೇರಿದಂತೆ ಆತನ ಪ್ರತಿಯೊಂದು ಚಟುವಟಿಕೆಯನ್ನು ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಇದೆ. ಜಹಾಂಗೀರ್ ಖಾನ್ ದೀರ್ಘಕಾಲದಿಂದ ಪೊಲೀಸ್ ನಿಗಾದಲ್ಲಿದ್ದ. ಆತನ ಬಂಧನದಿಂದ ದಕ್ಷಿಣ 24 ಪರಗಣದಲ್ಲಿ ಬಾಕಿ ಇರುವ ಹಲವು ಪ್ರಕರಣಗಳ ತನಿಖೆಗೆ ಹೊಸ ವೇಗ ಸಿಗಲಿದೆ. ಆತನ ಮೇಲಿರುವ ಹಳೆಯ ದೂರುಗಳ ಮರುಪರಿಶೀಲನೆ ಈಗಾಗಲೇ ಆರಂಭವಾಗಿದ್ದು, ಆತನ ಈ ಬಂಧನವು ಫಾಲ್ಟಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅನಾಮಧೇಯ ಅಧಿಕಾರಿಯೊಬ್ಬರು ಹೇಳುವಂತೆ, “ಜಹಾಂಗೀರ್ ಖಾನ್ ವಿರುದ್ಧದ ಹಲವು ಗಂಭೀರ ಆರೋಪಗಳು ತನಿಖೆಯ ಹಂತದಲ್ಲಿವೆ.

ಹಾಗೂ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ವಿಚಾರಣೆ ನಡೆಸುವುದು ತೀರಾ ಅಗತ್ಯವಾಗಿತ್ತು. ಆದರೆ, ಆತ ಕಳೆದ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದರಿಂದ ಪತ್ತೆ ಹಚ್ಚುವುದು ತನಿಖಾಧಿಕಾರಿಗಳಿಗೆ ಕಷ್ಟವಾಗಿತ್ತು. ಪಕ್ಕಾ ಮಾಹಿತಿ, ತಾಂತ್ರಿಕ ಕಣ್ಗಾವಲು ವಿಧಾನಗಳ ಮೂಲಕ ಆತನನ್ನು ನೇಪಾಳ ಗಡಿ ಬಳಿ ಯಶಸ್ವಿಯಾಗಿ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.













