ಮನೆ ಸುದ್ದಿ ಜಾಲ IAS, IPS ಅಧಿಕಾರಿಗಳ ವರ್ಗಾವಣೆ: ರಾಜ್ಯ ಗುಪ್ತಚರ ವಿಭಾಗದ ನೂತನ ಮುಖ್ಯಸ್ಥರಾಗಿ ಚಂದ್ರಗುಪ್ತ ನೇಮಕ

IAS, IPS ಅಧಿಕಾರಿಗಳ ವರ್ಗಾವಣೆ: ರಾಜ್ಯ ಗುಪ್ತಚರ ವಿಭಾಗದ ನೂತನ ಮುಖ್ಯಸ್ಥರಾಗಿ ಚಂದ್ರಗುಪ್ತ ನೇಮಕ

0

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಹಾಗೂ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಹಲವು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಹೊಸ ಜವಾಬ್ದಾರಿಗಳನ್ನು ವಹಿಸಿದೆ.

ಈ ವರ್ಗಾವಣೆಯಲ್ಲಿ ಪ್ರಮುಖವಾಗಿ ಹಿರಿಯ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಅವರನ್ನು ರಾಜ್ಯ ಗುಪ್ತಚರ ವಿಭಾಗ (ಇಂಟೆಲಿಜೆನ್ಸ್)ದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈವರೆಗೆ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾಭು ರಾಮ್ ಅವರ ಸ್ಥಾನಕ್ಕೆ ಚಂದ್ರಗುಪ್ತ ಅವರನ್ನು ನಿಯೋಜಿಸಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಮಾಹಿತಿಗಳ ಸಂಗ್ರಹಣೆಯ ಪ್ರಮುಖ ಹೊಣೆಗಾರಿಕೆ ಇದೀಗ ಅವರ ಹೆಗಲೇರಿದೆ.

ಇದರೊಂದಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಹೊಸ ಹುದ್ದೆಯೊಂದನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. “ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನಾ ಅನುಷ್ಠಾನ)” ಎಂಬ ಹೊಸ ಹುದ್ದೆ ರಚಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ವಿಶೇಷ ಆಯುಕ್ತರಾಗಿದ್ದ ಮುನೀಶ್ ಮೌದ್ಗಿಲ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಸಮಾನ ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಲಾಗಿದೆ.

ಹಿರಿಯ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಆ ಹುದ್ದೆಯಲ್ಲಿದ್ದ ಎನ್.ವಿ. ಪ್ರಸಾದ್ ಅವರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ. 2008ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಕಾವೇರಿ ಬಿ.ಬಿ. ಅವರನ್ನು ನಗರಾಭಿವೃದ್ಧಿ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಇನ್ನೂ, ಎಂ.ವಿ. ವೆಂಕಟೇಶ್ ಅವರನ್ನು ಸಹಕಾರ ಸಂಘಗಳ ನಿಬಂಧಕರಾಗಿ (Registrar of Co-operative Societies) ನೇಮಕ ಮಾಡಲಾಗಿದ್ದು, ಸೆಲ್ವಮಣಿ ಆರ್ ಅವರಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರ ಜವಾಬ್ದಾರಿ ವಹಿಸಲಾಗಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಣಬ್ ಮೊಹಂತಿ ಅವರನ್ನು ಅಪರಾಧ ತನಿಖಾ ಇಲಾಖೆ (CID), ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಸೈಬರ್ ಕ್ರೈಂ ವಿಭಾಗದ ಡಿಜಿಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ.

ರಾಜ್ಯದ ಆಡಳಿತ ಮತ್ತು ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈ ವರ್ಗಾವಣೆಗಳನ್ನು ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಹೊಸ ಹುದ್ದೆ ಸೃಷ್ಟಿಸಿರುವುದು ಹಾಗೂ ರಾಜ್ಯ ಗುಪ್ತಚರ ವಿಭಾಗಕ್ಕೆ ನೂತನ ಮುಖ್ಯಸ್ಥರ ನೇಮಕ ರಾಜ್ಯದ ಆಡಳಿತಾತ್ಮಕ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.