ಮನೆ ಸುದ್ದಿ ಜಾಲ ಐಡಿ ಕಾರ್ಡ್ ಕಡ್ಡಾಯ: ಪಬ್, ಬಾರ್, ಕ್ಲಬ್ ಪ್ರವೇಶಕ್ಕೆ ಹೊಸ ನಿಯಮ; ಗೃಹ ಸಚಿವ ಪ್ರಿಯಾಂಕ್...

ಐಡಿ ಕಾರ್ಡ್ ಕಡ್ಡಾಯ: ಪಬ್, ಬಾರ್, ಕ್ಲಬ್ ಪ್ರವೇಶಕ್ಕೆ ಹೊಸ ನಿಯಮ; ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

0

ಬೆಂಗಳೂರು: ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪಬ್, ಬಾರ್ ಹಾಗೂ ಮದ್ಯ ಪೂರೈಕೆ ಮಾಡುವ ಎಲ್ಲಾ ವಾಣಿಜ್ಯ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.

ಪಬ್, ಬ್ರೂವರಿ, ಬಾರ್, ಕ್ಲಬ್, ಲಾಂಜ್, ರೆಸ್ಟೋರೆಂಟ್ ಸೇರಿದಂತೆ ಮದ್ಯ ಮಾರಾಟ ಮಾಡುವ ಎಲ್ಲ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತಡೆಗಟ್ಟುವ ಕುರಿತು ನೋಟಿಸ್ ಜಾರಿ ಮಾಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ನಗರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮದ್ಯ ಪೂರೈಕೆ ಮಾಡುವ ಎಲ್ಲ ಸಂಸ್ಥೆಗಳು ಪ್ರವೇಶ ದ್ವಾರದಲ್ಲಿಯೇ ಹಾಗೂ ಮದ್ಯ ಸೇವೆ ನೀಡುವ ಮುನ್ನ ಗ್ರಾಹಕರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಇದರ ಪರಿಣಾಮವಾಗಿ ಮಾನ್ಯ ಗುರುತಿನ ಚೀಟಿ ಇಲ್ಲದವರಿಗೆ ಪಬ್ ಹಾಗೂ ಬಾರ್ ಗಳ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಅಧ್ಯಯನ ವರದಿಯಿಂದ ನಿರ್ಧಾರ

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಹಾಗೂ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಅಧ್ಯಯನವು ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 33 ರಷ್ಟು ಮಂದಿ ಮದ್ಯ ವ್ಯಸನಕ್ಕೆ ಒಳಗಾಗಿದ್ದು, ಸುಮಾರು ಶೇ 18 ರಷ್ಟು ಮಂದಿ ತಂಬಾಕು ವ್ಯಸನದಿಂದ ಬಳಲುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ವರದಿ ಪ್ರಕಾರ ಮದ್ಯಪಾನ ಆರಂಭಿಸುವ ಸರಾಸರಿ ವಯಸ್ಸು 17 ವರ್ಷವಾಗಿದೆ. ಕೆಲವು ಪ್ರಕರಣಗಳಲ್ಲಿ ಕೇವಲ 8 ವರ್ಷದ ಮಕ್ಕಳೇ ಮದ್ಯಪಾನ ಆರಂಭಿಸಿರುವುದು ದಾಖಲಾಗಿದೆ.

ಇದು ಕೇವಲ ಪರವಾನಗಿ ಸಂಬಂಧಿತ ವಿಚಾರವಲ್ಲ. ಯುವಜನರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ವಿಷಯವಾಗಿದೆ. ಆದ್ದರಿಂದ ಮದ್ಯ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳು ಗ್ರಾಹಕರಿಗೆ ಪ್ರವೇಶ ನೀಡುವ ಮೊದಲು ಹಾಗೂ ಮದ್ಯ ಪೂರೈಕೆ ಮಾಡುವ ಮುನ್ನ ಕಡ್ಡಾಯ ವಯಸ್ಸಿನ ಪರಿಶೀಲನಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ನಿರ್ದೇಶನಗಳು

  • ಮಾನ್ಯ ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನೀಡಬಾರದು
  • ಸರ್ಕಾರದಿಂದ ಮಾನ್ಯತೆ ಪಡೆದ ವಯಸ್ಸಿನ ಪುರಾವೆ ಕಡ್ಡಾಯ
  • ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆ ಮಾಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ
  • ಮಾಲೀಕರು, ವ್ಯವಸ್ಥಾಪಕರು ಹಾಗೂ ಪರವಾನಗಿ ಹೊಂದಿದವರೇ ಸಂಪೂರ್ಣ ಹೊಣೆಗಾರರು
  • ಪ್ರವೇಶ ದ್ವಾರದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಣೆಯಲ್ಲಿರಬೇಕು ಹಾಗೂ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು
  • ಸಂಸ್ಥೆಗಳು, ಆರ್ ಡಬ್ಲ್ಯೂ ಎ ಗಳು ಹಾಗೂ ನಾಗರಿಕರ ಗುಂಪುಗಳೊಂದಿಗೆ ಪೊಲೀಸ್ ಇಲಾಖೆ ಸಮನ್ವಯ ಸಾಧಿಸಬೇಕು
  • ವಾಣಿಜ್ಯ ಲಾಭಕ್ಕಾಗಿ ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯವನ್ನು ಅಪಾಯಕ್ಕೆ ಒಳಪಡಿಸಲು ಅವಕಾಶ ನೀಡುವುದಿಲ್ಲ
  • ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆಗೆ ಅವಕಾಶ ನೀಡುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಿದೆ

ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶ ಇಲ್ಲ; ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಅಪರಾಧಎಂದು ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿದೆ.