ಉಡುಪಿ, ಜೂನ್ 10: ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ತಡರಾತ್ರಿ ವಾಹನಕ್ಕೆ ದಾರಿ ಬಿಡುವ ವಿಚಾರವಾಗಿ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ತೀವ್ರ ವಾಗ್ವಾದ ನಡೆದು ಮಾರಾಮಾರಿಗೆ ತಿರುಗಿದ ಘಟನೆ ನಡೆದಿದೆ. ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಮತ್ತು ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ನಡುವೆಯೇ ಈ ಘರ್ಷಣೆ ಸಂಭವಿಸಿದೆ.
ಕಾರು ಚಲಾಯಿಸುವ ವಿಚಾರಕ್ಕೆ ಆರಂಭವಾದ ವಿವಾದ
ಮಹಿಳೆಯರು ಹಾಗೂ ಮಕ್ಕಳೊಂದಿಗೆ ಕೃಷ್ಣ ಮಠದ ದರ್ಶನಕ್ಕೆ ಆಗಮಿಸಿದ್ದ ಪ್ರವಾಸಿಗರು, ಸುಪ್ರೀತ್ ಅವರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಸೂಚಿಸಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸುಪ್ರೀತ್, ತಾನು ಸ್ಥಳೀಯ ವ್ಯಕ್ತಿಯಾಗಿದ್ದು, ಕಾರು ಓಡಿಸುವ ವಿಧಾನ ಇದೇ ಎಂದು ಹೇಳಿ ಪ್ರವಾಸಿಗರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಪ್ರವಾಸಿಗರ ಕಡೆಗೆ ಕಾರು ಚಲಾಯಿಸಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಇದರ ಬಳಿಕ ತನ್ನ ಕಾರಿನಲ್ಲಿದ್ದ ಕಂಬಳದ ಕೋಲನ್ನು ತೆಗೆದುಕೊಂಡು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಘಟನೆಯಲ್ಲಿ ಆಂಧ್ರಪ್ರದೇಶ ಮೂಲದ ಕೆಲ ಪ್ರವಾಸಿಗರು ಗಾಯಗೊಂಡಿದ್ದಾರೆ.
ಎರಡೂ ಕಡೆಯಿಂದ ದೂರು ದಾಖಲು
ಸ್ಥಳೀಯ ವ್ಯಕ್ತಿಯ ವರ್ತನೆಯಿಂದ ಆಕ್ರೋಶಗೊಂಡ ಪ್ರವಾಸಿಗರು ಸುಪ್ರೀತ್ ಅವರ ಕಾರಿನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಸುಪ್ರೀತ್ ಕೂಡ ಪೊಲೀಸರಿಗೆ ಪ್ರತಿದೂರು ನೀಡಿದ್ದು, ತಾನು ಪತ್ನಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವಾಸಿಗರು ಗಲಾಟೆ ನಡೆಸಿ, ಚೇರ್ ಹಾಗೂ ಫೋಟೋ ಸ್ಟ್ಯಾಂಡ್ ಬಳಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದ ಬಾಯಿಯಲ್ಲಿ ರಕ್ತಸ್ರಾವ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಪವನ್ ಹಾಗೂ ಸ್ಥಳೀಯ ನಿವಾಸಿ ಸುಪ್ರೀತ್ ನೀಡಿದ ಪ್ರತ್ಯೇಕ ದೂರುಗಳ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
















