ಮನೆ ಸುದ್ದಿ ಜಾಲ ಬೆಳಗಾವಿ : ಸಾವಿರ ಕಂಠಗಳ ವಚನೋತ್ಸವ

ಬೆಳಗಾವಿ : ಸಾವಿರ ಕಂಠಗಳ ವಚನೋತ್ಸವ

0

ಬೆಳಗಾವಿಇಲ್ಲಿನ ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ 1 ಗಂಟೆ 15 ನಿಮಿಷಗಳ ಕಾಲ ಬಸವಣ್ಣನವರ 34 ವಚನಗಳು ಸಾವಿರ ಕಂಠಗಳಿಂದ ಮೊಳಗಿದವು. ರಾಗಬದ್ಧವಾಗಿ ಹಾಡಿದ ವಚನಗಳಿಗೆ ಗಣ್ಯರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ಸಂಸ್ಥೆಯ ಕನ್ನಡ ಬಳಗ ಮತ್ತು ಸಂಗೀತ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ವಚನೋತ್ಸವ ಎಲ್ಲರ ಮನಸೂರೆಗೊಳಿಸಿತು. 5 ವರ್ಷದ ಮಕ್ಕಳಿಂದ ಹಿಡಿದು 80 ವರ್ಷo ವೃದ್ಧರವರೆಗೆ ಕೆಎಲ್ಇ ಸಂಸ್ಥೆಯ ಮೆಡಿಕಲ್, ಡೆಂಟಲ್, ಹೋಮಿಯೋಪಥಿ, ಫಾರ್ಮಸಿ, ಪಿಸಿಯೋಥೆರಪಿ, ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್, ಪ್ರಾಥಮಿಕ, ಪ್ರೌಢ, ಪಿಯು ಮತ್ತು ಪದವಿ ವಿದ್ಯಾರ್ಥಿಗಳು, ವೈದ್ಯರು, ಅಧ್ಯಾಪಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಒಟ್ಟಾಗಿ ವಚನಗಳನ್ನು ಏಕ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡಿದರು ಎಂಬುದ್ದಾಗಿದೆ.

ಮತ್ತು ಡೀಮ್ಡ್ ವಿ.ವಿಯ ಆವರಣದ ಮೆಟ್ಟಿಲುಗಳ ಮೇಲೆ ಶುಭ್ರ ಬಿಳಿ ಬಟ್ಟೆ ಧರಿಸಿ, ಕೊರಳಲ್ಲಿ ಬಸವಣ್ಣನ ಭಾವಚಿತ್ರವಿದ್ದ ವಚನೋತ್ಸವ ಶಲ್ಯ ಧರಿಸಿ ನಿಂತಿದ್ದ ಗಾಯಕರು ಶಿಸ್ತು, ರಾಗಬದ್ಧವಾಗಿ 34 ವಚನಗಳನ್ನು ಹಾಡಿದರು. ಈ ಮೊದಲು ಶಿವಮೊಗ್ಗದಲ್ಲಿ ಆಯೋಜಿಸಿದ್ದ ವಚನ ಗಾಯನ ಮಾದರಿಯಲ್ಲಿ ಇದೇ ಮೊದಲ ಬಾರಿ ಬೆಳಗಾವಿಯಲ್ಲಿ ವಚನೋತ್ಸವ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಗಾಯಕ ದಿವಂಗತ ಸಿ.ಅಶ್ವಥ್ ಅವರು ರಾಗ ಸಂಯೋಜಿಸಿ ಹಾಡಿದ ಮಾದರಿಯನ್ನು ಅನುಸರಿಸಿ ವಚನಗಳನ್ನು ಪ್ರಸ್ತುತಪಡಿಸಲಾಯಿತು. ಇಲ್ಲಿನ ಸಂಗೀತ ಮಹಾವಿದ್ಯಾಲಯದ ಶಿಕ್ಷಕರು ಕಳೆದ ಮೂರು ತಿಂಗಳು ನಿರಂತರ ಶ್ರಮವಹಿಸಿ ಸಮೂಹ ಗಾಯನ ಸಿದ್ಧಪಡಿಸಿ ಆಯೋಜಿಸಿದ್ದಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡೀಮ್ಡ್ ವಿ.ವಿ. ಕುಲಾಧಿಪತಿ ಡಾ.ಪ್ರಭಾಕರ ಕೋರೆ ವಚನಗಾಯನದ ಮಾಧುರ್ಯಕ್ಕೆ ಮನಸೋತರು. ಪ್ರತಿ ವರ್ಷ ದೊಡ್ಡ ಮಟ್ಟದಲ್ಲಿ ವಚನೋತ್ಸವ ಆಯೋಜಿಸುವ ಭರವಸೆ ನೀಡಿದರು. “12ನೇ ಶತಮಾನದಲ್ಲಿಯೇ‌ ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತು ‘ಅನುಭವ ಮಂಟಪ’ ‌ಮೂಲಕ ಜಾತಿ, ವರ್ಣ, ವರ್ಗ ಭೇದದ ವಿರುದ್ಧ ಧ್ವನಿ ಎತ್ತಿ ಎಲ್ಲರನ್ನೂ ಸಮಾನವಾಗಿ ಕಂಡರು.

ಅಂದು ಪುರುಷರ ಸಮಾನವಾಗಿ ಮಹಿಳೆಯರಿಗೂ ಅವಕಾಶ ಕಲ್ಪಿಸಿದರು. ಸಾಮಾನ್ಯ ಜನರಿಗೆ ಅರ್ಥ ಆಗುವ ರೀತಿಯಲ್ಲಿ ವಚನಗಳನ್ನು ಬರೆದರು. ಇಂದಿನ ಕಾಲಘಟ್ಟದಲ್ಲಿ ವಚನಗಳು ಅತ್ಯಂತ ಸೂಕ್ತವಾಗಿವೆ” ಎಂದು ಅವರು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗದ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, “ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿರುವ ಸಂದರ್ಭದಲ್ಲಿ ಶರಣರ ವಚನ ಗಾಯನ ಒಂದು ಅಮೋಘ ನಿದರ್ಶನವಾಗಿದೆ. ಇಡೀ ಜಗತ್ತು ಇಂದು ಯುದ್ದ, ಅಶಾಂತಿ, ಮಾನವೀಯ ಮೌಲ್ಯಗಳ ಕುಸಿತದಿಂದಾಗಿ ಕತ್ತಲೆ ಆವರಿಸಿದೆ. ಇದಕ್ಕೆ ಬಸವಾದಿ ಶರಣರ ಮಾನವಪರ ಬೆಳಕು ಕತ್ತಲೆಯನ್ನು ದೂರಿ ಸರಿಸುವ ಸಾಮರ್ಥ್ಯ ಹೊಂದಿದೆ” ಎಂದ ಅವರು, “ಲಿಂಗಾಯತರು ಬಸವಣ್ಣನವರನ್ನು ತಮ್ಮ ಹಿಡಿತದಿಂದ ಬಿಡಿಸಿ, ಜನಸಾಮಾನ್ಯರ ಮಧ್ಯೆ ಒಪ್ಪಿಸುವ ಪ್ರಕ್ರಿಯೆ ನಡೆಯಬೇಕಾಗಿದ್ದು, ವಚನೋತ್ಸವ ಇದಕ್ಕೆ ಪೂರಕವಾದ ಕಾರ್ಯಕ್ರಮ” ಎಂದು ಆಶಿಸಿದರು ಎನ್ನಲಾಗಿದೆ.