ಮನೆ ಸುದ್ದಿ ಜಾಲ ವೈದ್ಯರನ್ನು ಬೇಗ ಭೇಟಿ ಮಾಡಲು ನಕಲಿ ಸಬ್‌-ಇನ್‌ಸ್ಪೆಕ್ಟರ್ ಆಗಿ ನಟಿಸಿದ್ದ ಮಹಿಳೆ ಬಂಧನ

ವೈದ್ಯರನ್ನು ಬೇಗ ಭೇಟಿ ಮಾಡಲು ನಕಲಿ ಸಬ್‌-ಇನ್‌ಸ್ಪೆಕ್ಟರ್ ಆಗಿ ನಟಿಸಿದ್ದ ಮಹಿಳೆ ಬಂಧನ

0

ತಾನು ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ 25 ವರ್ಷದ ಮಹಿಳೆಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ತನಿಖೆಯಲ್ಲಿ ಆಕೆ ಯಾವುದೇ ಪೊಲೀಸ್ ಅಧಿಕಾರಿ ಅಲ್ಲ, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಪ್ರಭಾವ ತೋರಿಸಲು ನಕಲಿ ಪೊಲೀಸ್ ಯೂನಿಫಾರ್ಮ್ ಧರಿಸುತ್ತಿದ್ದಳು ಎಂಬುದು ಬೆಳಕಿಗೆ ಬಂದಿದ್ದು ಬಂಧಿತೆಯನ್ನು ಸಮೀನಾ ಆಸಿಫ್ ಇನಾಮ್ದಾರ್ ಅಲಿಯಾಸ್ ಸಮೀನಾ ಅಯೂಬ್ ಪಠಾಣ್ (25) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಮೀನಾ ಯಾವಾಗಲೂ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸು ಹೊಂದಿದ್ದಳು. ಆದರೆ ಅದು ನೆರವೇರದ ಕಾರಣ, ಶಾರ್ಟ್‌ಕಟ್ ಮಾರ್ಗವನ್ನು ಆರಿಸಿಕೊಂಡಿದ್ದಳು. ತನಿಖೆ ಪ್ರಕಾರ, ಸಮೀನಾ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್‌ಗಳ ಯೂನಿಫಾರ್ಮ್‌ನ್ನು ಹೋಲುವಂತೆ ಉಡುಪು ಹೊಲಿಸಿಕೊಂಡು, ಅದಕ್ಕೆ ಹುದ್ದೆ ಸೂಚಿಸುವ ಸ್ಟಾರ್‌ಗಳನ್ನೂ ಅಳವಡಿಸಿದ್ದಳು. ಆ ಯೂನಿಫಾರ್ಮ್ ಧರಿಸಿ ಪುಣೆಯ ಕ್ಯಾಂಪ್ ಪ್ರದೇಶದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದಳು. ಪೊಲೀಸ್ ಅಧಿಕಾರಿಯಂತೆ ನಟಿಸಿ ಸಿಬ್ಬಂದಿಯ ಮೇಲೆ ಪ್ರಭಾವ ಬೀರಿ, ಸಾಲಿನಲ್ಲಿ ನಿಲ್ಲದೇ ವೈದ್ಯರನ್ನು ಬೇಗ ಭೇಟಿ ಮಾಡುವ ಉದ್ದೇಶ ಹೊಂದಿದ್ದಳು ಎಂದು ತಿಳಿದುಬಂದಿದೆ.

ನಂತರ ಸಮೀನಾ ಕ್ಲಿನಿಕ್ ಸಮೀಪ ತನ್ನ ಪ್ರಭಾವ ತೋರಿಸುತ್ತಿದ್ದ ವೇಳೆ, ಅಲ್ಲಿ ಗಸ್ತು ತಿರುಗುತ್ತಿದ್ದ ನಿಜವಾದ PSI ಮಹೇಶ್ ಶಿಂಡೆ ಅವರ ಗಮನಕ್ಕೆ ಬಂದಳು. ಆಕೆಯ ವರ್ತನೆ ಅನುಮಾನ ಹುಟ್ಟಿಸಿದ ಕಾರಣ, ಅವರು ಪೋಸ್ಟಿಂಗ್ ಎಲ್ಲಿದೆ ಎಂದು ಕೇಳಿ ಅಧಿಕೃತ ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದರು. ಆದರೆ ಸಮೀನಾ ಯಾವುದೇ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಅನುಮಾನ ದೃಢವಾದ ನಂತರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಬಂಧಿಸಿದರು. ಈ ಸಂಬಂಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮೀನಾಳನ್ನು ಬಂಧಿಸಿದ್ದಾರೆ. ಈ ಹಿಂದೆ ಕೂಡ ಯಾರನ್ನಾದರೂ ಮೋಸಗೊಳಿಸಲು ಅಥವಾ ತನ್ನ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಳ್ಳಲು ನಕಲಿ ಪೊಲೀಸ್ ಗುರುತನ್ನು ಬಳಸಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.