ಮನೆ ಸುದ್ದಿ ಜಾಲ ಎಂ.ಬಿ. ಪಾಟೀಲ್ ಮನವಿ : ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯನ್ನ ಉಡಾನ್ ಯೋಜನೆಗೆ ಸೇರಿಸಿ

ಎಂ.ಬಿ. ಪಾಟೀಲ್ ಮನವಿ : ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆಯನ್ನ ಉಡಾನ್ ಯೋಜನೆಗೆ ಸೇರಿಸಿ

0

ಬೆಂಗಳೂರು (ಜೂ.11): ಲೆನಾಡು ಮತ್ತು ಮಧ್ಯ ಕರ್ನಾಟಕದ ಆರ್ಥಿಕ ಹಾಗೂ ಪ್ರಗತಿಗೆ ನಿರ್ಣಾಯಕವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆ ಸ್ಥಗಿತಗೊಂಡಿದ್ದು, ಇದನ್ನು ಪುನರಾರಂಭಿಸುವಂತೆ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ನಷ್ಟದ ಕಾರಣಕ್ಕಾಗಿ ಸದ್ಯಕ್ಕೆ ಸ್ಥಗಿತಗೊಂಡಿರುವ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆಯನ್ನು ಸದ್ಯದಲ್ಲೇ ನಡೆಯಲಿರುವ ಉಡಾನ್ (UDAN – Ude Desh ka Aam Nagrik) ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸೇರಿಸಬೇಕು ಎಂದು ಸಚಿವ ಪಾಟೀಲರು ಮನವಿ ಮಾಡಿದ್ದಾರೆ. ಈ ಸೇವೆಯನ್ನು ಪುನಾರಂಭ ಮಾಡುವುದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಸಮಗ್ರ ಪ್ರಗತಿಗೆ ಭವ್ಯ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವು 2023ರ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಿತು ಎನ್ನಲಾಗಿದೆ.

ಹಾಗೂ ಆರಂಭದಲ್ಲಿ ಇಂಡಿಗೋ ಸಂಸ್ಥೆಯು ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ, ಕೆಲ ತಿಂಗಳಿನಿಂದ ಈ ಸೇವೆಯು ಸ್ಥಗಿತಗೊಂಡಿದ್ದು, ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ತೀವ್ರ ತೊಂದರೆಯಾಗಿದೆ. ಈ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ವಿಮಾನ ಸೇವೆ ಅತ್ಯಂತ ನಿರ್ಣಾಯಕವಾಗಿತ್ತು. ಇದರ ಸ್ಥಗಿತದಿಂದ ಈ ಎಲ್ಲಾ ಕ್ಷೇತ್ರಗಳಿಗೂ ತೀವ್ರ ಹಿನ್ನಡೆಯಾಗಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ನೇರ ವಿಮಾನ ಸಂಪರ್ಕವಿಲ್ಲದೆ ಇರುವುದರಿಂದ, ದೇಶದ ಬೇರೆ ಬೇರೆ ಭಾಗಗಳು ಮತ್ತು ವಿದೇಶಗಳಿಗೆ ಪ್ರಯಾಣಿಸುವವರಿಗೂ ದೊಡ್ಡ ಅಡಚಣೆಯಾಗಿದೆ. ಸಮಯದ ಉಳಿತಾಯ ಮತ್ತು ಸುಗಮ ಪ್ರಯಾಣಕ್ಕೆ ವಿಮಾನ ಸೇವೆ ಅತ್ಯಗತ್ಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ವಿಜಿಟಿ (VGF – Viability Gap Funding) ನೆರವಿನ ಮೂಲಕ ‘ಉಡಾನ್’ ಯೋಜನೆಯ ಉದ್ದೇಶಿತ ಬಿಡ್‌ನಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗವನ್ನು ಸೇರಿಸಲು ಕೇಂದ್ರ ಸಚಿವರು ಮಧ್ಯೆ ಪ್ರವೇಶಿಸಬೇಕು ಎಂದು ಎಂ.ಬಿ.ಪಾಟೀಲರು ಕೋರಿದ್ದಾರೆ.

ಇದರಿಂದ ಉಡಾನ್ ಯೋಜನೆಯು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸಾಮಾನ್ಯ ನಾಗರಿಕರಿಗೂ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹೊಂದಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಒದಗಿಸುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಉಳಿದ ಎಲ್ಲಾ ಮೂಲಸೌಕರ್ಯಗಳೂ ಇಲ್ಲಿ ಈಗಾಗಲೇ ಲಭ್ಯವಿದೆ. ಆದ್ದರಿಂದ, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂಬುದ್ದಾಗಿದೆ.