ಮನೆ ಸುದ್ದಿ ಜಾಲ ಇಷ್ಟವಿಲ್ಲದ  ಕಂಪ್ಯೂಟರ್ ಸೈನ್ಸ್ ಓದುವಂತೆ ಬಲವಂತ; ತಂದೆ ಅಕ್ಕನನ್ನು ಚಾಕುವಿನಿಂದ ಇರಿದು ಕೊಂದ ಬಾಲಕ!

ಇಷ್ಟವಿಲ್ಲದ  ಕಂಪ್ಯೂಟರ್ ಸೈನ್ಸ್ ಓದುವಂತೆ ಬಲವಂತ; ತಂದೆ ಅಕ್ಕನನ್ನು ಚಾಕುವಿನಿಂದ ಇರಿದು ಕೊಂದ ಬಾಲಕ!

0

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದ್ದ ಕುಟುಂಬದ ಹತ್ಯಾಕಾಂಡಕ್ಕೆ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಆರಂಭದಲ್ಲಿ ಆನ್‌ಲೈನ್ ಗೇಮ್ ಚಟದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದರೂ, ತನಿಖೆಯ ವೇಳೆ ಬೇರೆ ಕಾರಣಗಳು ಹೊರಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕನನ್ನು ವಿಚಾರಣೆ ನಡೆಸಿದ ವೇಳೆ, ತನ್ನ ಆಸಕ್ತಿಗೆ ವಿರುದ್ಧವಾದ ಕೋರ್ಸ್ ಆಯ್ಕೆ ಮಾಡಿಸಿದ್ದರಿಂದ ಕುಟುಂಬದವರ ವಿರುದ್ಧ ಅಸಮಾಧಾನ ಹೊಂದಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?

ಜೂನ್ 6ರಂದು ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಬಾಲಕನ ತಂದೆ ಮತ್ತು ಅಕ್ಕ ಮೃತಪಟ್ಟಿದ್ದರು. ತಾಯಿಯೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಬಾಲಕನಿಗೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವ ಆಸಕ್ತಿ ಇತ್ತು. ಆದರೆ ಕುಟುಂಬದವರು ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಸೇರ್ಪಡೆಗೊಳಿಸಿದ್ದರು ಎನ್ನಲಾಗಿದೆ.

ತನಿಖೆಯಲ್ಲಿ ಏನು ತಿಳಿದುಬಂದಿದೆ?

ಬಾಲಕನು ತನ್ನ ಇಚ್ಛೆಗೆ ವಿರುದ್ಧವಾದ ವಿಷಯದಲ್ಲಿ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ತನಿಖೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಥಮ ಪಿಯುಸಿಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದ ಕಾರಣ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಿರಬಹುದು ಎಂಬ ಶಂಕೆಯನ್ನೂ ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪೋಷಕರು ಓದಿನ ಬಗ್ಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಬಾಲಕ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಘಟನೆಗೆ ಮುನ್ನವೇ ಚಾಕು ಖರೀದಿಸಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ದೊರೆತಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಪೊಲೀಸರ ಮಾಹಿತಿ

ಘಟನೆ ನಡೆದ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಹಲ್ಲೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತ ಅಕ್ಕ ಮತ್ತು ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿಯ ಮೇಲೂ ಹಲ್ಲೆ ನಡೆದಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಕುರಿತು ಬಾಲಕ ನೀಡಿರುವ ಹೇಳಿಕೆ ಮತ್ತು ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಕ್ರಮ ಏನು?

ಪ್ರಸ್ತುತ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಮಾನಸಿಕ ಆರೋಗ್ಯ ತಜ್ಞರಿಂದ ಕೌನ್ಸಿಲಿಂಗ್ ನಡೆಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರ ಪ್ರಕಾರ, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದ್ದು, ಬಾಲಕನ ಮಾನಸಿಕ ಸ್ಥಿತಿ ಮತ್ತು ಘಟನೆಗೆ ಕಾರಣವಾದ ಸಂದರ್ಭಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.