ಮನೆ ಸುದ್ದಿ ಜಾಲ ಕಲಬುರಗಿ : ಸರ್ಕಾರಿ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿತ  ̧ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಕಲಬುರಗಿ : ಸರ್ಕಾರಿ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿತ  ̧ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

0

ಕಲಬುರಗಿ ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಕಾಲೇಜೊಂದರಲ್ಲಿ ಶುಕಗ್ರವಾರ ಬೆಳಗ್ಗೆ ಭೀಕರ ಅವಘಡವೊಂದು ಸಂಭವಿಸಿದೆ. ಪಾಠ ಕೇಳುತ್ತಾ ಕುಳಿತಿದ್ದ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಶಾಲಾ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಕಲಬುರಗಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಲ್ಕನೇ ಮಹಡಿಯ ಕ್ಲಾಸ್ ರೂಂನಲ್ಲಿ ಇಂದು ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರಿಗೆ ‘ಅಕೌಂಟೆನ್ಸಿ’ ಪಾಠ ಭೋದನೆ ನಡೆಯುತ್ತಿತ್ತು. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತುಂಬಿದ್ದ ಕೊಠಡಿಯಲ್ಲಿ ಪಾಠ ಕೇಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿಯ ಕಾಂಕ್ರೀಟ್ ಭಾಗ ವಿದ್ಯಾರ್ಥಿನಿಯರ ಮೇಲೆ ಕುಸಿದು ಬಿದ್ದಿದೆ. ಮೇಲ್ಚಾವಣಿ ಕುಸಿಯುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿನಿಯರು ಪ್ರಾಣ ಉಳಿಸಿಕೊಳ್ಳಲು ಏಕಕಾಲಕ್ಕೆ ಕೊಠಡಿಯಿಂದ ಹೊರಗೆ ಓಡಲು ಯತ್ನಿಸಿದರು ಎನ್ನಲಾಗಿದೆ.

ಇದರಿಂದಾಗಿ ಕ್ಲಾಸ್ ರೂಂನಲ್ಲಿ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳನ್ನೂ ಮಾಡಿಕೊಂಡಿದ್ದಾರೆ. ಮೇಲ್ಚಾವಣಿಯ ದೊಡ್ಡ ಕಾಂಕ್ರೀಟ್ ತುಂಡುಗಳು ನೇರವಾಗಿ ತಲೆಯ ಮೇಲೆ ಬಿದ್ದಿದ್ದರಿಂದ ಮೂವರು ವಿದ್ಯಾರ್ಥಿನಿಯರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಘಟನೆಯಲ್ಲಿ ಶೀತಲ್  . ಸ್ನೇಹಾ, ದಿವ್ಯಾ ಸುಭಾಷ್ ಎಂಬುವವರಿಗೆ ತೀವ್ರ ರಕ್ತಗಾಯಗಳಾಗಿವೆ. ಇವರ ಜೊತೆಗೆ ಪೂಜಾ ಗುಂಡಪ್ಪ ಹಾಗೂ ಸೃಷ್ಟಿ ಶಿವಾನಂದ ಎಂಬುವವರಿಗೂ ಗಾಯಗಳಾಗಿವೆ. ತಕ್ಷಣವೇ ಕಾಲೇಜು ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಾಳುಗಳನ್ನು ಕಲಬುರಗಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಪ್ರಾಂಶುಪಾಲ ದೇವನಗೌಡ ಅವರು, ‘ಕಟ್ಟಡವು ತುಂಬಾ ಹಳೆಯದೇನಲ್ಲ, ಆದರೆ ಮೇಲ್ಛಾವಣಿಯ ಮೇಲೆ ಮಳೆ ನೀರು ನಿಲ್ಲುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇಡೀ ಕಟ್ಟಡದ ಸ್ಥಿತಿ ಸದ್ಯ ಹೀಗೆಯೇ ಇದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಭಯದಲ್ಲೇ ಕಾಲ ಕಳೆಯುವಂತಾಗಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ,’ ಎಂದು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ಕಾಲೇಜಿನ ಇತರ ವಿದ್ಯಾರ್ಥಿನಿಯರು ಮತ್ತು ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸರ್ಕಾರಿ ಕಟ್ಟಡಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ತೀವ್ರ ಚರ್ಚೆ ಆರಂಭವಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಕೇಳಿಬರುತ್ತಿದೆ ಎನ್ನಲಾಗಿದೆ.