ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಮಾಜಿ ಯೋಧನ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ವಿಮೆ ಹಣದ ಆಸೆಗಾಗಿ ಕೊಲೆ ಸಂಚು ರೂಪಿಸಿ ಹತ್ಯೆ ನಡೆಸಿದ ಆರೋಪದಡಿ ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಹಾಗೂ ಮಾಜಿ ಸೈನಿಕ ಸಂದೀಪ್ ಅವರ ಸಾವಿನ ಪ್ರಕರಣದ ತನಿಖೆ ವೇಳೆ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಲಾಗಿದ್ದ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿದೆ.
ಪೊಲೀಸರ ಪ್ರಕಾರ, ಸಂದೀಪ್ ಅವರ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ್ ವಿಠ್ಠಲ್ ಡೊಂಬಾರ್ ನೇತೃತ್ವದಲ್ಲಿ ಈ ಸಂಚು ರೂಪಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ವಿಮೆ ಹಣಕ್ಕಾಗಿ ಸಂಚು
ಮೂಲಗಳ ಪ್ರಕಾರ, ಸಂದೀಪ್ ಅವರ ಹೆಸರಿನಲ್ಲಿ ಇದ್ದ ಸುಮಾರು 2 ಕೋಟಿ ರೂ. ಮೌಲ್ಯದ ವಿಮೆ ಮೊತ್ತ ಪಡೆಯುವ ಉದ್ದೇಶದಿಂದ ಕೊಲೆ ಸಂಚು ರೂಪಿಸಲಾಗಿತ್ತು. ಸಂದೀಪ್ ಅವರು ವಿವಿಧ ಬ್ಯಾಂಕ್‌ಗಳಲ್ಲಿ ವಿಮಾ ಪಾಲಿಸಿಗಳನ್ನು ಹೊಂದಿದ್ದು, ಅಪಘಾತದಿಂದ ಸಾವನ್ನಪ್ಪಿದರೆ ದೊಡ್ಡ ಮೊತ್ತದ ವಿಮೆ ಹಣ ದೊರೆಯುವ ಸಾಧ್ಯತೆ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
9 ಮಂದಿ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸುಮಾ ಸಂದೀಪ್ ಮಂಜರಗಿ, ಆಕೆಯ ಪ್ರಿಯಕರ ಪುಂಡಲೀಕ್ ವಿಠ್ಠಲ್ ಡೊಂಬಾರ್, ಆರ್‌ಎಂಪಿ ವೈದ್ಯ ಡಾ. ಬಸವರಾಜ ಭಾಸ್ಮೆ, ಬೆಳಗಾವಿ ಆಯುಕ್ತರ ಕಚೇರಿಯ ಎಫ್‌ಡಿಎ ಅಧಿಕಾರಿ ಅಶೋಕ್ ಗುಜನಾಳ, ವಿಧಿವಿಜ್ಞಾನ ಪ್ರಯೋಗಾಲಯದ ಕ್ಲರ್ಕ್ ಅಪ್ಪಾಸಾಹೇಬ ನಾಯಕ್, ಪ್ರಯೋಗಾಲಯ ಸಹಾಯಕ ಚನ್ನಯ್ಯ ಅಡಿವಿಸ್ವಾಮಿಮಠ, ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ್, ಸಚಿನ್ ಸೆಳಾರ್ ಹಾಗೂ ಫಾರ್ಮಸಿ ವಿದ್ಯಾರ್ಥಿ ರಾಹುಲ್ ಜೋಗಿ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ಅಕ್ರಮ ಸಂಬಂಧದಿಂದ ಹುಟ್ಟಿದ ಸಂಚು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಪ್ರಕಾರ, ಸುಮಾ ಮತ್ತು ಪುಂಡಲೀಕ್ ನಡುವೆ ಪರಿಚಯ ಬೆಳೆದು ಬಳಿಕ ಅದು ಆಪ್ತ ಸಂಬಂಧಕ್ಕೆ ತಿರುಗಿತ್ತು. ಇಬ್ಬರೂ ಸೇರಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸಂದೀಪ್ ಅವರನ್ನು ಕೊಲ್ಲುವ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದೇ ಅವಧಿಯಲ್ಲಿ ಸಂದೀಪ್ ಅವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಿಮಾ ಪಾಲಿಸಿಗಳನ್ನು ಮಾಡಿಸಲಾಗಿದೆ. ಕೆಲವು ಪಾಲಿಸಿಗಳ ಬಗ್ಗೆ ಸಂದೀಪ್ ಅವರಿಗೆ ಮಾಹಿತಿ ಇರಲಿಲ್ಲ ಎಂಬ ಅನುಮಾನವೂ ವ್ಯಕ್ತವಾಗಿದೆ.
ಆಸ್ಪತ್ರೆಯಲ್ಲೇ ವಿಷ ನೀಡಿ ಹತ್ಯೆ ಆರೋಪ
ಮಾರ್ಚ್ 13ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಸಂದೀಪ್ ಅವರನ್ನು ಮೊದಲು ಹುಕ್ಕೇರಿ ಆಸ್ಪತ್ರೆಗೆ ಹಾಗೂ ಬಳಿಕ ಘಟಪ್ರಭದ ಜೆ.ಜಿ. ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಜೀವಕ್ಕೆ ಅಪಾಯವಾಗುವಷ್ಟು ಗಂಭೀರ ಗಾಯಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಲೈನ್ ಬಾಟಲಿಯಲ್ಲಿ ವಿಷ ಬೆರೆಸಿ ನೀಡಲಾಗಿದೆ. ಜೊತೆಗೆ ನಿದ್ರೆ ಮಾತ್ರೆಗಳನ್ನೂ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಪರಿಣಾಮವಾಗಿ ಮಾರ್ಚ್ 15ರಂದು ಸಂದೀಪ್ ಮೃತಪಟ್ಟಿದ್ದಾರೆ ಎಂದು ತನಿಖೆ ಸೂಚಿಸಿದೆ.
ಎಫ್‌ಎಸ್‌ಎಲ್ ವರದಿ ತಿರುಚಿದ ಆರೋಪ
ಪ್ರಕರಣದ ಅತ್ಯಂತ ಗಂಭೀರ ಅಂಶವೆಂದರೆ, ಸಾವನ್ನು ಸಹಜ ಸಾವು ಎಂದು ತೋರಿಸಲು ವಿಧಿವಿಜ್ಞಾನ ವರದಿಯನ್ನು ತಿರುಚಲು ಪ್ರಯತ್ನ ನಡೆದಿದೆ ಎಂಬ ಆರೋಪ. ತನಿಖೆಯಲ್ಲಿ ಕೆಲವು ಅಧಿಕಾರಿಗಳ ಪಾತ್ರವೂ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯನ್ನೂ ಬಂಧಿಸಲಾಗಿದೆ.
ಸಾಮಾಜಿಕ ಜಾಲತಾಣ ಪೋಸ್ಟ್‌ನಿಂದ ಬಯಲಾದ ರಹಸ್ಯ
ಸಂದೀಪ್ ಅವರ ಸಾವಿನ ಬಳಿಕ ರಸ್ತೆ ಅಪಘಾತದ ಗಾಯಗಳಿಂದ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ನಂತರ ಪುಂಡಲೀಕ್ ಸಾಮಾಜಿಕ ಜಾಲತಾಣದಲ್ಲಿ ಅನುಮಾನ ಹುಟ್ಟಿಸುವ ರೀತಿಯ ಸ್ಟೇಟಸ್ ಹಾಕಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಂಪೂರ್ಣ ಸಂಚು ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಶವ ಹೊರತೆಗೆದು ಮರು ಪರೀಕ್ಷೆ
ಸಂದೇಹ ಗಾಢವಾಗುತ್ತಿದ್ದಂತೆ ನ್ಯಾಯಾಲಯದ ಅನುಮತಿ ಪಡೆದು ಸಂದೀಪ್ ಅವರ ಶವವನ್ನು ಸಮಾಧಿಯಿಂದ ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕೊಲೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ವಿಷದ ಬಾಟಲಿಗಳು, ಸಿರಿಂಜ್‌ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.
ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1), 238(B) ಮತ್ತು 3(5) ಅಡಿಯಲ್ಲಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಕೆ. ರಾಮರಾಜನ್, “ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೇ ವೈಜ್ಞಾನಿಕ ವರದಿಗಳನ್ನು ಬದಲಾಯಿಸುವ ಮಟ್ಟಕ್ಕೆ ಹೋಗಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಈ ಬೆಳವಣಿಗೆ ಸಾರ್ವಜನಿಕರ ವಿಶ್ವಾಸದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ” ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳು ಹಾಗೂ ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
















