ಮನೆ ಸುದ್ದಿ ಜಾಲ ನೀಟ್ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ

ನೀಟ್ ಪ್ರತಿಭಟನೆ ವೇಳೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಮೇಲೆ ಹಲ್ಲೆ

0

ಜೈಪುರ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.ಮಧ್ಯಾಹ್ನ 3 ಗಂಟೆಗೆ ಶಹೀದ್ ಸ್ಮಾರಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅಭಿಜಿತ್ ದಿಪ್ಕೆ ಕರೆ ನೀಡಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ವೇದಿಕೆಯತ್ತ ತೆರಳುತ್ತಿದ್ದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ವರದಿಯಾಗಿದೆ.

ಮಾಹಿತಿಯ ಪ್ರಕಾರ, ದಿಪ್ಕೆ ಅವರನ್ನು ಅವರ ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು ಸಾಗಿಸುತ್ತಿದ್ದಾಗ, ಗುಂಪಿನಲ್ಲಿದ್ದ ಕೆಲವರು ಅವರ ಕುತ್ತಿಗೆಯಲ್ಲಿದ್ದ ಸ್ಕಾರ್ಫ್ ಅನ್ನು ಎಳೆದಿದ್ದಾರೆ. ಈ ವೇಳೆ ಅವರು ಕೆಳಕ್ಕೆ ಬಾಗುತ್ತಿದ್ದಂತೆಯೇ ಕೆಲವರು ಅವರನ್ನು ಹಿಡಿದು ಹಲ್ಲೆ ನಡೆಸಿದ್ದು, ಹಲವು ಬಾರಿ ಕಪಾಳಕ್ಕೆ ಹೊಡೆದಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಅಲ್ಲದೆ ಅವರನ್ನು ಕೆಳಕ್ಕೆ ಎಳೆಯಲು ಯತ್ನಿಸಿದ ಆರೋಪವೂ ಕೇಳಿಬಂದಿದೆ.

ಘಟನೆಯಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ದಿಪ್ಕೆ ಅವರನ್ನು ಸುತ್ತುವರಿದು ಕೆಲವರು ತಳ್ಳಾಟ-ನೂಕಾಟ ನಡೆಸುತ್ತಿರುವ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಹಲ್ಲೆ ನಡೆಸಿದವರ ಗುರುತು ಅಥವಾ ಘಟನೆಯ ಹಿಂದಿನ ಕಾರಣಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೈಹಿಕ ದಾಳಿ ಹೇಡಿತನದ ಸಂಕೇತ’

ತಮ್ಮ ಮೇಲಿನ ಹಲ್ಲೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅಭಿಜಿತ್ ದಿಪ್ಕೆ, ದೈಹಿಕ ದಾಳಿಗಳು ಭಯ ಮತ್ತು ಹೇಡಿತನದ ಸಂಕೇತ ಎಂದು ಹೇಳಿದ್ದಾರೆ. “ನಾವು ಶಾಂತಿಯುತವಾಗಿ ನಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ. ನಾನು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿ. ಈ ಹೋರಾಟವನ್ನು ಶಾಂತಿ ಮತ್ತು ಪ್ರೀತಿಯ ಮೂಲಕವೇ ಮುಂದುವರಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ತಮ್ಮ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

ದೇಶಾದ್ಯಂತ ಪ್ರತಿಭಟನೆಗಳ ಎಚ್ಚರಿಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ದೇಶಾದ್ಯಂತ ಪ್ರತಿಭಟನೆಗಳ ಸರಣಿಯನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ನವದೆಹಲಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಸಮಾವೇಶ ಆಯೋಜಿಸಿತ್ತು. ನಂತರ ಅಮೃತಸರ, ಪುಣೆ, ಬೆಂಗಳೂರು, ಹೈದರಾಬಾದ್ ಹಾಗೂ ಲಖನೌ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ.

ಈ ಚಳವಳಿ ದೇಶಾದ್ಯಂತ ವಿಸ್ತರಿಸುತ್ತಿದ್ದು, ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ದೆಹಲಿಯಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅಭಿಜಿತ್ ದಿಪ್ಕೆ ಎಚ್ಚರಿಕೆ ನೀಡಿದ್ದಾರೆ.