ಮನೆ ಸುದ್ದಿ ಜಾಲ ಮೈಸೂರು ಅಗ್ನಿ ದುರಂತ ಪ್ರಕರಣಕ್ಕೆ ಟ್ವಿಸ್ಟ್: ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿತ್ತಾ ಪಬ್?

ಮೈಸೂರು ಅಗ್ನಿ ದುರಂತ ಪ್ರಕರಣಕ್ಕೆ ಟ್ವಿಸ್ಟ್: ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿತ್ತಾ ಪಬ್?

0

ಮೈಸೂರು, ಜೂನ್ 16: ದಟ್ಟಗಳ್ಳಿಯಲ್ಲಿರುವ ಫಾಕ್ಸ್ ಡೆನ್ ರೆಸ್ಟೋ ಬಾರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಘಟನೆ ನಡೆದ ರೆಸ್ಟೋ ಬಾರ್ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪಗಳು ವ್ಯಕ್ತವಾಗಿವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಮೀಪದಲ್ಲೇ ಈ ಪಬ್ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆ, ಶಾಲೆ ಹಾಗೂ ದೇವಸ್ಥಾನಗಳಿಂದ ನಿಗದಿತ ಅಂತರ ಕಾಯ್ದುಕೊಳ್ಳಬೇಕಾದ ನಿಯಮ ಉಲ್ಲಂಘನೆಯಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸ್ಥಳೀಯರ ಪ್ರಕಾರ, ಪಬ್‌ಗೆ ಕೇವಲ ಒಂದೇ ಕಿರಿದಾದ ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದು, ತುರ್ತು ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಹೊರಬರಲು ಸೂಕ್ತ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಜೊತೆಗೆ ತಾತ್ಕಾಲಿಕ ಮಾದರಿಯ ರಚನೆ ನಿರ್ಮಿಸಲಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಸುಲಭವಾದ ಹುಲ್ಲು, ಬಿದಿರು ಸೇರಿದಂತೆ ದಹನಶೀಲ ವಸ್ತುಗಳನ್ನು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.

ಇದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ದುರಂತದ ತೀವ್ರತೆ ಹೆಚ್ಚಲು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದು, ಸುರಕ್ಷತಾ ನಿಯಮಗಳ ಪಾಲನೆ ಕುರಿತು ಸಮರ್ಪಕ ಪರಿಶೀಲನೆ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಅಗ್ನಿ ದುರಂತದ ನಿಖರ ಕಾರಣ, ಕಟ್ಟಡಕ್ಕೆ ನೀಡಲಾಗಿದ್ದ ಅನುಮತಿಗಳು, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ನಿಯಮ ಉಲ್ಲಂಘನೆಗಳ ಕುರಿತು ಸಂಬಂಧಿತ ಇಲಾಖೆಗಳು ತನಿಖೆ ನಡೆಸುತ್ತಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.