ನವದೆಹಲಿ, ಜೂನ್ 16: ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ಸಿರಪ್ ಆಧಾರಿತ ಔಷಧಿಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದ್ದು, ಇನ್ನುಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇಂತಹ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಔಷಧಿಗಳ ದುರುಪಯೋಗ ತಡೆಯುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು Drugs (Fifth Amendment) Rules, 2026 ಅಧಿಸೂಚನೆಯನ್ನು ಹೊರಡಿಸಿದ್ದು, ಇದರ ಮೂಲಕ 1945ರ ಔಷಧ ನಿಯಮಗಳಲ್ಲಿನ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

ಏನು ಬದಲಾಗಿದೆ?
ಹೊಸ ನಿಯಮದ ಪ್ರಕಾರ, ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ಸಿರಪ್ ರೂಪದ ಔಷಧಿಗಳನ್ನು ಇನ್ನುಮುಂದೆ ವೈದ್ಯರ ಮಾನ್ಯ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಮಾರಾಟ ಮಾಡಬೇಕು. ಇದರಿಂದ ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ತೆರೆ ಬಿದ್ದಿದೆ. ಸಚಿವಾಲಯವು 1945ರ ಔಷಧ ನಿಯಮಗಳ Schedule K ಪಟ್ಟಿಯಿಂದ “Syrups” ಎಂಬ ಪದವನ್ನು ತೆಗೆದುಹಾಕಿದೆ. ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಸಿರಪ್ ಔಷಧಿಗಳಿಗೆ ವಿಶೇಷ ವಿನಾಯಿತಿ ಇತ್ತು. ಹೊಸ ತಿದ್ದುಪಡಿಯೊಂದಿಗೆ ಆ ವಿನಾಯಿತಿ ರದ್ದಾಗಿದೆ.
ಸಣ್ಣ ಹಳ್ಳಿಗಳಿಗೂ ಅನ್ವಯ
ಹಿಂದೆ 1,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದ ಗ್ರಾಮಗಳಲ್ಲಿ ಪರವಾನಗಿ ಪಡೆದ ಔಷಧ ಅಂಗಡಿ ಇಲ್ಲದಿದ್ದರೆ ಕೆಲವು ಸಿರಪ್ ಔಷಧಿಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮದ ಬಳಿಕ ದೇಶದ ಎಲ್ಲ ಭಾಗಗಳಲ್ಲೂ ಪರವಾನಗಿ ಪಡೆದ ಔಷಧಾಲಯಗಳ ಮೂಲಕವೇ ಸಿರಪ್ ಮಾರಾಟ ಮಾಡಬೇಕಾಗುತ್ತದೆ.

ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಕೆಮ್ಮಿನ ಸಿರಪ್‌ಗಳ ದುರುಪಯೋಗ, ನಿಯಂತ್ರಣವಿಲ್ಲದ ಬಳಕೆ ಹಾಗೂ ಕೆಲವು ರಾಜ್ಯಗಳಲ್ಲಿ ಕಳಪೆ ಗುಣಮಟ್ಟದ ಸಿರಪ್‌ಗಳಿಂದ ಉಂಟಾದ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಔಷಧಿಗಳ ಸುರಕ್ಷಿತ ಬಳಕೆ ಮತ್ತು ಜವಾಬ್ದಾರಿಯುತ ಮಾರಾಟವನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
ನಿಯಮ ಉಲ್ಲಂಘಿಸಿದರೆ ಕ್ರಮ
ಹೊಸ ನಿಯಮಗಳನ್ನು ಪಾಲಿಸದ ಔಷಧ ತಯಾರಕರು, ವಿತರಕರು ಹಾಗೂ ಔಷಧ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
















