ಮೈಸೂರು: ಲಿಂಗ ಸಮಾನತೆ ಬಗ್ಗೆ ಹೆಚ್ಚೆಚ್ಚು ವಿಚಾರ ಸಂಕಿರಣ ಹಾಗೂ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸ್ಪರ್ಶ್ (ಎಬಿಎಸ್ ಅಂಡ್ ಐಸಿಸಿ ) ಸಮಿತಿ ವತಿಯಿಂದ ‘ಲಿಂಗ ಸಮಾನತೆ ಮತ್ತು ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ವರ್ಚುವಲ್ ಮೂಲಕ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯದ ಮೊದಲ ಹಾಗೂ ದೇಶದ 6ನೇ ವಿವಿ. ಇದಕ್ಕೆ 100 ವರ್ಷಗಳ ಇತಿಹಾಸ ಇದೆ. ಮೈಸೂರು ವಿವಿಯ ಪ್ರಾರಂಭವಾದ ಸಮಯದಲ್ಲೇ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದೆ. ಆ ಮೂಲಕ ಮಹಿಳಾ ಶಿಕ್ಷಣಕ್ಕೆ ಪೋಷಕರು ಕೂಡ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸ್ಪರ್ಶ್ ಸಮಿತಿ ಮೈಸೂರು ವಿವಿಯಲ್ಲಿ ಯಾವುದೇ ಮಹಿಳೆಯರು ಅಥವಾ ವಿದ್ಯಾರ್ಥಿನಿಯರಿಗೆ ತೊಂದರೆ ಆದರೆ ಅವರ ನೆರವಿಗೆ ಬರುತ್ತದೆ. ಸೂಕ್ತ ವಿಚಾರಣೆ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಈ ಸಮಿತಿ ನಡೆಸುವ ಎಲ್ಲಾ ಅರಿವು ಕಾರ್ಯಕ್ರಮ ವಿವಿ ಎಲ್ಲಾ ಸಿಬ್ಬಂದಿಗಳಿಗೆ ತಲುಪಬೇಕೆಂದು ಆಶಿಸಿದರು.
ಕುಲಸಚಿವ ಪ್ರೊ.ಆರ್. ಶಿವಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರು. ಲಿಂಗದ ಆಧಾರ ಮೇಲೆ ತಾರತಮ್ಯ ಮಾಡಬಾರದು ಗಂಡು -ಹೆಣ್ಣು ಇಬ್ಬರು ಸಮಾನರು. ಎಲ್ಲರಿಗೂ ಸಮಾನ ಅವಕಾಶ ಇದೆ. ಸಮಾಜದಲ್ಲಿ ಲಿಂಗ ಸಮಾನತೆ ಇದ್ದರೆ ದೇಶವನ್ನು ಸದೃಢವಾಗಿ ಕಟ್ಟಬಹುದು. ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬುದನ್ನು ಇತಿಹಾಸದ ಹಲವು ಘಟನೆಗಳು ನಿರೂಪಿಸಿವೆ. ಲಿಂಗ ಸಬಲೀಕರಣಕ್ಕೆ ನಾವೆಲ್ಲರೂ ಶ್ರಮಿಸಬೇಕು. ಮೈವಿವಿಯಲ್ಲಿರುವ ಎಲ್ಲಾ ಮಹಿಳೆಯರಿಗೆ ಒಳ್ಳೆಯ ವಾತಾವರಣ ಸೃಷ್ಟಿಸಲು ಸ್ಪರ್ಶ್ ಸಮಿತಿ ರಚನೆ ಆಗಿದೆ ಎಂದು ಹೇಳಿದರು.
ಪ್ರಸ್ತುತ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. ಶೇ.33 ರಷ್ಟು ಮೀಸಲಾತಿ ಇದೆ. ಆದರೆ, ನಿಜವಾಗಿಯೂ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಶೇ.50 ರಷ್ಟು ಮೀಸಲಾತಿ ಸಿಗಬೇಕು. ಹೆಣ್ಣು ಮಕ್ಕಳನ್ನು ಮನೆಗೆ ಸೀಮಿತಗೊಳಿಸಲಾಗುತ್ತಿದೆ. ಇದು ತಪ್ಪಬೇಕು. ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಪೋಷಕರು ಬಿಡಬೇಕು. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇರುತ್ತದೆ. ಸಮಾಜಕ್ಕೆ ಅದರ ಪ್ರಯೋಜನ ಸಿಗಬೇಕು ಎಂದು ಹೇಳಿದರು.
ಬೆಂಗಳೂರಿನ ಎನ್‌ಎಸ್‌ಎಲ್ ಐಯುನ ಕಾನೂನು ಪ್ರಾಧ್ಯಾಪಕರಾದ ಪ್ರೊ.ಸರಸು ಎಸ್ತರ್ ಥಾಮಸ್ ಹಾಗೂ ಹೈಕೋರ್ಟ್ ನ ವಕೀಲೆ ಸುಮಿತ್ರಾ ಆಚಾರ್ಯ ಅವರು ಆನ್‌ಲೈನ್ ನಲ್ಲಿ ಉಪನ್ಯಾಸ ನೀಡಿದರು. ಸ್ಪರ್ಶ್ ಸಮಿತಿ ನಿರ್ದೇಶಕಿ ಪ್ರೊ.ಕೆ.ಜಿ.ಆಶಾ ಮಂಜರಿ, ಆಂತರಿಕ ದೂರು ಸಮಿತಿ ನಿರ್ದೇಶಕಿ ಪ್ರೊ.ಅಸೀಮ ನುಸ್ರತ್, ಪ್ರೊ.ಸುತ್ತೂರು ಮಾಲಿನಿ, ಡಾ. ಗೀತಾ ಸೇರಿದಂತೆ ಇತರರು ಇದ್ದರು.