ಮೈಸೂರು (Mysuru): ರಾಜ್ಯ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿ ನೆಪ ಮಾತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಜನಮನ ಪ್ರತಿಷ್ಠಾನದಿಂದ ನಗರದ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸಿದ್ದರಾಮಯ್ಯ ಆಡಳಿತ: ನೀತಿ–ನಿರ್ಧಾರ’ ಗ್ರಂಥ ಬಿಡುಗಡೆ ಹಾಗೂ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಒಪ್ಪಿಗೆ ಇಲ್ಲ. ಒಂದು ಚಿಹ್ನೆ, ಒಂದು ಸಿದ್ಧಾಂತ ಹಾಗೂ ಒಬ್ಬ ನಾಯಕ ಇರಲೆಂದು ಆ ಪಕ್ಷದವರು ಬಯಸುತ್ತಾರೆ. ಅದಕ್ಕಾಗಿಯೇ ಸಂವಿಧಾನ ಬದಲಿಸಲು ಹೊರಟಿದ್ದಾರೆ. ಅಸಮಾನತೆ ಇರಲೆಂದೇ ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯು ಮೀಸಲಾತಿ ಪರವಿಲ್ಲ. ಹಂತ ಹಂತವಾಗಿ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಹೀಗಾದರೆ ಅಹಿಂದ ವರ್ಗದವರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ? ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಅಬ್ಬರದ ಪ್ರಚಾರ ಮಾಡಿದರಲ್ಲಾ, ಮೇಕ್ ಇನ್ ಇಂಡಿಯಾ ಅನುಷ್ಠಾನಕ್ಕೆ ಬಂದಿದೆಯೇ? ರಫ್ತಿಗಿಂಗಲೂ ಆಮದು ಜಾಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಯೊಬ್ಬರಿಗೂ 15 ಲಕ್ಷ ರೂ. ಕೊಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಕಪ್ಪು ಹಣ ವಾಪಸ್ ತರುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ. ಒಳ್ಳೆಯ ದಿನಗಳನ್ನು ತರುತ್ತೇವೆ ಎಂದಿದ್ದರು. ಆ ಭರವಸೆಗಳೆಲ್ಲವೂ ಈಡೇರಿವೆಯೇ? ಸುಳ್ಳುಗಳನ್ನು ಹೇಳಿ ಹೇಳಿ ಅದನ್ನೇ ನಿಜ ಮಾಡುತ್ತಿದ್ದಾರೆ. ಹಿಟ್ಲರ್ ಸುಳ್ಳು ಹೇಳುವುದಕ್ಕೆಂದೇ ಒಬ್ಬ ಮಂತ್ರಿ ಇಟ್ಟುಕೊಂಡಿದ್ದ. ಹಾಗೆಯೇ ಇವರೂ ಹಲವರನ್ನು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಾಡಿದ್ದೆಲ್ಲವನ್ನೂ ಮತ್ತು ಹೇಳುತ್ತಿರುವ ಸುಳ್ಳುಗಳೆಲ್ಲವನ್ನೂ ಸಹಿಸಿಕೊಂಡಿದ್ದೀರೇಕೆ? ಹಣ ಪಡೆದುಕೊಂಡು ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಹೇಗೆ ಸಾಧ್ಯ? ಆಪರೇಷನ್ ಕಮಲಕ್ಕೆ ಬಲಿಯಾದವರನ್ನು ಗೆಲ್ಲಿಸಿದಿರೇಕೆ? ಇದೆಲ್ಲವನ್ನೂ ಪ್ರಶ್ನಿಸುವ ನನ್ನ ಮೇಲೆ ಬಿಜೆಪಿಯವರು ಮುಗಿ ಬೀಳುತ್ತಾರೆ. ಆದರೆ, ನನ್ನ ರಕ್ಷಣೆಗೆ ನೀವ್ಯಾರೂ ಬರುತ್ತಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ರಾಜಕೀಯ ಪಕ್ಷವಾಗಿ ನಾವೆಷ್ಟು ವಿರೋಧಿಸಬೇಕೋ ಅಷ್ಟು ವಿರೋಧಿಸುತ್ತೇವೆ. ಸಾರ್ವಜನಿಕರು ಪ್ರತಿಕ್ರಿಯಿಸುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಎಸ್‌ಸಿಪಿ–ಟಿಎಸ್‌ಪಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಆದರೆ, ಬಿಜೆಪಿಯಲ್ಲಿರುವ ದಲಿತ ಶಾಸಕರು, ಸಂಸದರು ಪ್ರಶ್ನಿಸುತ್ತಿಲ್ಲವೇಕೆ? ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಬಗ್ಗೆ ನಮ್ಮ ಸರ್ಕಾರವಿದ್ದಾಗ ಕೇಳುತ್ತಿದ್ದಿರಿ. ಈಗೇಕೆ ಕೇಳುತ್ತಿಲ್ಲ? ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಹಾಗೂ ನಾರಾಯಣಸ್ವಾಮಿ ಆ ಬಗ್ಗೆ ಪ್ರಶ್ನಿಸುತ್ತಿಲ್ಲವೇಕೆ?’ ಎಂದು ಪ್ರಶ್ನೆ ಮಾಡಿದರು.