ಮನೆ ದೇವಸ್ಥಾನ ಮಲ್ಲಿಕಾರ್ಜುನ, ಭಮರಾಂಬಿಕೆಯ ನೆಲವೀಡು ಮುಡುಕುತೊರೆ

ಮಲ್ಲಿಕಾರ್ಜುನ, ಭಮರಾಂಬಿಕೆಯ ನೆಲವೀಡು ಮುಡುಕುತೊರೆ

0

ಕಾರ್ತಿಕ ಮಾಸದ ಬಹುಳ ಅಮಾವಾಸ್ಯೆಯ ಸೋಮವಾರ ಸೂರ್ಯ ಮತ್ತು ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಸಂಭವಿಸುವ ಕುಹುಯೋಗದಲ್ಲಿ ನಡೆಯುವ ಪವಿತ್ರ ಪಂಚಲಿಂಗ ದರ್ಶನದ ಖ್ಯಾತಿಯ ತಲಕಾಡಿನ ಬಳಿಯೇ ಇರುವ ಪಂಚಲಿಂಗ ಕ್ಷೇತ್ರಗಳಲ್ಲಿ  ಮುಡುಕುತೊರೆಯೂ ಒಂದು.

ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಮುಡುಕುತೊರೆ ಇತಿಹಾಸ ಪ್ರಸಿದ್ಧ  ಸ್ಥಳವಷ್ಟೇ ಅಲ್ಲ, ಶ್ರೀಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕಾ ದೇವಿ ನೆಲೆಸಿಹ ಪುರಾಣ ಪ್ರಸಿದ್ಧ ಪವಿತ್ರ ಪುಣ್ಯಕ್ಷೇತ್ರ ಕೂಡ.

ಈ ಪವಿತ್ರ ಕ್ಷೇತ್ರದಲ್ಲಿ ಕನ್ನಡ ನಾಡಿನ ಜೀವನದಿಯಾದ ಕಾವೇರಿ ನಿರ್ಮಲವಾಗಿ ಶಾಂತ ಚಿತ್ತದಿಂದ ಹರಿಯುವುದನ್ನು ನೋಡುವುದೇ ಒಂದು ಸೊಬಗು.  ನದಿ ದಂಡೆಯ ಪಕ್ಕದಲ್ಲೇ ಪ್ರಾಕೃತಿಕ ರಮಣೀಯ ಸೊಬಗಿನಿಂದ ಕೂಡಿದ ಸೋಮಗಿರಿ ಎಂಬ ಸಸ್ಯ ಸಂಪತ್ತಿನಿಂದ ಕೂಡಿದ  ಬೆಟ್ಟವಿದೆ. ಈ ಬೆಟ್ಟದ ಮೇಲೆಯೇ ಜ್ಯೋತಿರ್ಲಿಂಗ ಸ್ವರೂಪನಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಭ್ರಮರಾಂಬಿಕಾ ಸಹಿತನಾಗಿ ನೆಲೆಸಿರುವುದು.

ಮುಡುಕುತೊರೆ ಆಸ್ತಿಕ ನಾಸ್ತಿಕರಿಬ್ಬರನ್ನೂ ಸೆಳೆಯುವ ತಾಣ. ಮುಡುಕುತೊರೆ ಬೆಟ್ಟದ ಮೇಲೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ, ಬಿಲ್ಲಿನಾಕಾರದಲ್ಲಿ ತಿರುಗುತ್ತಾ ಹರಿಯುವ ಕಾವೇರಿ ನದಿಯ  ರಮಣೀಯ ದೃಶ್ಯ ಕಣ್ಮನ ಸೂರೆಗೊಳ್ಳುತ್ತದೆ.  ಈ ಮನೋಹರ ದೃಶ್ಯ ಬೆಟ್ಟ ಹತ್ತುವ ಆಯಾಸವೆಲ್ಲವೂ ಕ್ಷಣ ಮಾತ್ರದಲ್ಲಿ ಮರೆಯಾಗುತ್ತದೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

ಇತಿಹಾಸ: ಸುಮಾರು 300 ಅಡಿಗಳಷ್ಟು ಎತ್ತರದಲ್ಲಿರುವ ಬೆಟ್ಟದ ಮೇಲೆ ಗಂಗರ ಕಾಲದಲ್ಲಿ  ಮೂಲ ದೇವಾಲಯ ನಿರ್ಮಿಸಲಾಗಿತ್ತು, ನಂತರ ವಿಜಯನಗರದ ವಾಸ್ತುಶಿಲ್ಪ ಶೈಲಿಯಲ್ಲಿ ದೇವಾಲಯದ ಜೀರ್ಣೋದ್ದಾರ ಮಾಡಲಾಗಿದೆ, ದೇವಸ್ಥಾನದ ಪಶ್ಚಿಮದಲ್ಲಿರುವ ಸುಂದರ ಪ್ರವೇಶ ದ್ವಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿಸಿದರು ಹೀಗೆ ವಿವಿಧ ಹಂತದಲ್ಲಿ ದೇವಾಲಯ ಅಭಿವೃದ್ಧಿ ಹೊಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗಲು ಮುಖ್ಯ ಪ್ರವೇಶ ದ್ವಾರದಿಂದ 101 ಮೆಟ್ಟಿಲು ನಿರ್ಮಿಸಲಾಗಿದೆ. ಮೂರು ಅಂತಸ್ತಿನ ಪ್ರಧಾನ ಪ್ರವೇಶ ಗೋಪುರದ ಎರಡೂ ಬದಿಯಲ್ಲಿ ಬೃಹತ್ ನಂದಿಯ ವಿಗ್ರಹಗಳನ್ನು ನಿರ್ಮಿಸಲಾಗಿದ್ದು, ಪ್ರವೇಶದ್ವಾರದ ನೋಟವೇ ಮನೋಹರವಾಗಿದೆ.

ಆದರೆ 2009 ಮತ್ತು 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದ ಸಂದರ್ಭದಲ್ಲಿ ಇಲ್ಲಿ ಪಶ್ಚಿಮದ ಪ್ರವೇಶದ್ವಾರ ಮುಚ್ಚಿ ಉತ್ತರ ದ್ವಾರದಿಂದ ಪ್ರವೇಶಾವಕಾಶ ಮಾಡಲಾಗಿದ್ದು ಸರತಿಯ ಸಾಲಿನಲ್ಲಿ ಸಾಗುವ ಭಕ್ತರಿಗೆ ಮಳೆ, ಬಿಸಿಲ ಬಾಧೆ ತಟ್ಟದಂತೆ ಮೇಲ್ಛಾವಣಿಯನ್ನೂ ನಿರ್ಮಿಸಲಾಗಿದೆ.

ಪುರಾಣದಲ್ಲಿ ಸಹ ಈ ಕ್ಷೇತ್ರದ ಪ್ರಸ್ತಾಪ ಇದೆಯಂತೆ.  ಮುಡುಕುತೊರೆಯ ಇತಿಹಾಸ  ಮಹಾಭಾರತದ ಕಾಲದಿಂದ ಆರಂಭವಾಗುತ್ತದೆ. ಪಾಂಡವರು  ಅಜ್ಞಾತವಾಸದಲ್ಲಿದ್ದಾಗ ಮಧ್ಯಮ ಪಾಂಡವ, ಅರ್ಜುನ ಈ ಮಾರ್ಗವಾಗಿ ಸಂಚರಿಸುವಾಗ  ಮಲ್ಲಿಕಾ ಪುಷ್ಪದಿಂದ ಇಲ್ಲಿದ್ದ ಶಿವಲಿಂಗಕ್ಕೆ ಪೂಜೆ ಮಾಡಿದನಂತೆ, ಅರ್ಜುನ ಮಲ್ಲಿಕಾಪುಷ್ಪದಿಂದ ಪೂಜಿಸಿದ ಈ ಲಿಂಗಕ್ಕೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿದೆ ಎಂದು ಅರ್ಚಕರು ಹೇಳುತ್ತಾರೆ. 

ಮಲ್ಲಿಕಾರ್ಜುನ ದೇವಾಲಯ ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಸುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳಿಂದ ಕೂಡಿದೆ. ಇಲ್ಲಿ ಶಿವ ಪೂರ್ವಾಭಿಮುಖನಾಗಿದ್ದಾನೆ. ದೇವಾಲಯದ ಮುಂದೆ ನಂದಿಕಂಬವೂ ಇದೆ. ನವರಂಗದಲ್ಲಿರುವ ಕಂಬಗಳಲ್ಲಿ ಹಲವು ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಬಹುತೇಕ ಎಲ್ಲ ಕಂಬಗಳಿಗೂ ಬಣ್ಣ ಬಳಿಯಲಾಗಿದ್ದು, ಪುರಾತನ ದೇವಾಲಯದ ಸಹಜ ಸೌಂದರ್ಯ ಮರೆಯಾಗಿದೆ.

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯ ಪ್ರವೇಶ ದ್ವಾರದ ಮೇಲಿನ ಗಾರೆಗಚ್ಚಿನ ಗೋಪುರದಲ್ಲಿ ಶಿವಪಾರ್ವತಿಯ ಸುಂದರ ಗಾರೆ ಶಿಲ್ಪವಿದೆ. ಪ್ರಧಾನಗರ್ಭಗೃಹದಲ್ಲಿ ಎರಡು ಲಿಂಗಗಳಿವೆ. ದೊಡ್ಡ ಶಿವಲಿಂಗಕ್ಕೆ ಐದು ಹೆಡೆಯ ಸರ್ಪವಿರುವ ಹಾಗೂ ಗಂಗೆಯನ್ನು ತಲೆಯ ಮೇಲೆ ಕೂರಿಸಿಕೊಂಡ ಶಿವನ ಮುಖವಿರುವ ಬೆಳ್ಳಿಯ ಕವಚ ಧಾರಣೆ ಮಾಡಿ ಅಲಂಕಾರಿಸಲಾಗುತ್ತದೆ. ಹಿಂದಿರುವ ರಜತ ಪ್ರಭಾವಳಿ ಕೂಡ ಈ ಮೂರ್ತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇನ್ನು ಕೆಳಗಿರುವ ಮತ್ತೊಂದು ಶಿವಲಿಂಗಕ್ಕೆ ವಿಭೂತಿಯಷ್ಟೇ ಇರುವ ಲಿಂಗರೂಪದ ಹಿತ್ತಾಳೆಯ ಕೊಳಗ ಮತ್ತು ಬೆಳ್ಳಿಯ ಐದು ಹೆಡೆ ಸರ್ಪದ ಅಲಂಕಾರ ಮಾಡಲಾಗುತ್ತದೆ. ಬೆಟ್ಟವೇರಿ, ಕಷ್ಟ ನಿವಾರಣೆ ಮಾಡುವಂತೆ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಶಿವ ಈಡೇರಿಸುತ್ತಾನೆ ಎಂಬುದು ನಂಬಿಕೆ.

ಭ್ರಮರಾಂಬಿಕಾ ದೇವಾಲಯ:– ಬೆಟ್ಟದ ಮೇಲೆ ಮಲ್ಲಿಕಾರ್ಜುನ ಗುಡಿಯ ಪಕ್ಕದಲ್ಲೇ ಶ್ರೀ ಭ್ರಮರಾಂಬಿಕಾ ದೇವಿಗೆ ಪ್ರತ್ಯೇಕ ಗುಡಿಯಿದ್ದು, ಇದು ಮನೋಹರವಾಗಿದೆ. ಈ ಗುಡಿ ಸಹ ಗರ್ಭಗೃಹ, ಸುಕನಾಸಿ, ನವರಂಗ ಹಾಗೂ ಮುಖಮಂಟಪವನ್ನು ಹೊಂದಿದೆ. ಪ್ರಧಾನ ಗರ್ಭಗೃಹದಲ್ಲಿ ಸಿಂಹಪೀಠದ ಮೇಲೆ ಶೋಭಾಯಮಾನವಾಗಿರುವ ಐದಡಿ ಎತ್ತರದ ಭ್ರಮರಾಂಬಿಕೆಯ ವಿಗ್ರಹ ಸೌಮ್ಯಸ್ವರೂಪದ್ದಾಗಿದ್ದು, ನಯನ ಮನೋಹರವಾಗಿದೆ. ಪುಷ್ಪ, ವಸ್ತ್ರ, ಆಭರಣಾಲಂಕಾರದಲ್ಲಿ ದೇವಿಯ ಕಾಂತಿ, ಸೊಬಗು ನೂರ್ಮಡಿಗೊಳ್ಳುತ್ತದೆ. ಭಕ್ತರು ಭಾವ ಪರವಶರಾಗಿ ನಿಲ್ಲುವಂತಹ ಮೂರ್ತಿ ಇದೆಂದರೆ ಅತಿಶಯೋಕ್ತಿಯಲ್ಲ. ಶಂಖ ಚಕ್ರ ಹಿಡಿದು ವರದ ಮುದ್ರೆ ಹಾಗೂ ಕಮಲ ಹಸ್ತ ಹೊಂದಿರುವ ದೇವಿಯನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನ್ನಿಸುವಷ್ಟು ಆಕರ್ಷಕವಾಗಿದೆ.

ಭ್ರಮರಾಂಬಾ ಸಹಿತ ಮಲ್ಲಿಕಾರ್ಜುನ ದೇವರ ಗುಡಿಗೆ ಬರುವ ಭಕ್ತರು  ಹಲವಾರು ಬಗೆಯ ಹರಕೆಗಳನ್ನು ಈಡೇರಿಸುತ್ತಾರೆ. 101 ಮೆಟ್ಟಿಲಿಗೂ  ತಲಾ 2 ವೀಳ್ಯದ ಎಲೆ, ಅಡಿಕೆ, ಎರಡು ಬಾಳೆಹಣ್ಣು ಹಾಗೂ 1 ತೆಂಗಿನಕಾಯಿ ಇಟ್ಟು, ಪ್ರತಿ ಮೆಟ್ಟಲಿಗೂ ಹೆಜ್ಜೆ ನಮಸ್ಕಾರ ಹಾಕುತ್ತಾ ದೇವಾಲಯ ಪ್ರವೇಶಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಕಾಮ್ಯಾರ್ಥ ಸಿದ್ಧಿಸುತ್ತದೆ ಎಂಬುದು ನಂಬಿಕೆ.

ದೇವಾಲಯದಲ್ಲಿ ನವಗ್ರಹ, ಗಣೇಶ, ಆಂಜನೇಯ ಹಾಗೂ ಮಾದೇಶ್ವರನ ಉಪ ಸನ್ನಿಧಾನಗಳಿವೆ. ಬೆಟ್ಟದ ತಪ್ಪಲಿನಲ್ಲಿ ಗ್ರಾಮದೇವತೆ ಬೆಟ್ಟಹಳ್ಳಿ ಮಾರಮ್ಮನ ಗುಡಿಯೂ ಇದೆ.

ಮಳವಳ್ಳಿಯಿಂದ ತಲಕಾಡಿಗೆ ಹೋಗುವ ಮಾರ್ಗದಲ್ಲಿ ತಲಕಾಡಿಗೆ 4 ಕಿಲೋ ಮೀಟರ್ ಇರುವಾಗಲೇ ಬೆಟ್ಟದ ಮೇಲಿರುವ ಈ ಸುಂದರ ದೇವಾಲಯ ಕಾಣುತ್ತದೆ. ರಸ್ತೆಯ ಬಲ ಭಾಗದಲ್ಲಿ ಪ್ರಶಾಂತವಾಗಿ ಹರಿಯುವ ಕಾವೇರಿ ಮನಸೆಳೆದರೆ, ಎಡ ಭಾಗದ ಬೆಟ್ಟದಲ್ಲಿರುವ ಸುಂದರ ದೇವಾಲಯ ಆಕರ್ಷಿಸುತ್ತದೆ.

ಬೆಟ್ಟದ ಮೇಲಿರುವ ದೇವಾಲಯದ ಮೆಟ್ಟಿಲುಗಳವರೆಗೆ ಹೋಗಲು ರಸ್ತೆಯ ಸಂಪರ್ಕವೂ ಇದೆ. ಇಲ್ಲಿ 20-25 ಮೆಟ್ಟಿಲು ಏರಿ, ಬೆಟ್ಟದ ಮೇಲೆ ನಿಂತು ನೋಡಿದರೆ ಕಾವೇರಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ತಿರುಗಿ ಮತ್ತು ಪೂರ್ವದತ್ತ ಮುರಿದಂತೆ ತಿರುಗಿ ತೊರೆಯಂತೆ ಹರಿಯುವ ದೃಶ್ಯ ಕಾಣುತ್ತದೆ. ಹೀಗೆ ಕಾವೇರಿ ಮುರಿದಂತೆ ಹರಿವುದರಿಂದಲೇ ಈ ಊರಿಗೆ ಮುಡುಕುತೊರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ರಥೋತ್ಸವ:- ಇಲ್ಲಿ ಪ್ರತಿವರ್ಷ ಎರಡು ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ನಡೆಯುವ ರಥೋತ್ಸವ ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದಾದ ಮೂರು ದಿನಗಳ ಬಳಿಕ ಕಾವೇರಿ ನದಿಯಲ್ಲಿ ನಡೆಯುವ ತೆಪ್ಪೊತ್ಸವ ಹಾಗೂ ದನಗಳ ಜಾತ್ರೆ ಜಗತ್ಪ್ರಸಿದ್ಧವಾಗಿದೆ. ದೊಡ್ಡ ಜಾತ್ರೆಯ ಮೂರು ತಿಂಗಳ ಬಳಿಕ ಚಿಕ್ಕ ಜಾತ್ರೆ ನಡೆಯುತ್ತದೆ. ಇಲ್ಲಿ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಿಕೆಯ ದರ್ಶನ ಪಡೆದರೆ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆಯರ ದರ್ಶನ ಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬುದು ಭಕ್ತರ ನಂಬಿಕೆ.