ಮನೆ ದೇಶ ಕೇರಳದ 8 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್ ಘೋಷಣೆ

ಕೇರಳದ 8 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್ ಘೋಷಣೆ

0

ತಿರುವನಂತಪುರ (Thiruvananthapuram): ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಮಳೆ ಸ್ವಲ್ಪಮಟ್ಟಿಗೆ ತಗ್ಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳ ಭಾಗದಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಇದೇ ವೇಳೆ ಉತ್ತರ ಕೇರಳದ ಕಾಸರಗೋಡು, ಇಡುಕ್ಕಿ, ತ್ರಿಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕೋಯಿಕೋಡ್‌, ವಯನಾಡು, ಕಣ್ಣೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಐಎಂಡಿ, ಈ ಎಂಟು ಜಿಲ್ಲೆಗಳಿಗೆ ಒಂದು ದಿನ ಮಟ್ಟಿಗೆ ಆರೆಂಜ್‌ ಅಲರ್ಟ್ ಘೋಷಿಸಿದೆ.

ಭಾರಿ ಮಳೆಯಿಂದ ಭರ್ತಿಯಾಗಿರುವ ಮುಲ್ಲಪೆರಿಯಾರ್‌ ಜಲಾಶಯದ ಮೂರು ಗೇಟ್‌ಗಳನ್ನು ಬೆಳಿಗ್ಗೆ 11.30ಕ್ಕೆ ತೆರೆದು ನೀರು ಹೊರ ಬಿಡಲಾಗುತ್ತಿದೆ ಎಂದು ಕೇರಳ ಜಲಸಂಪನ್ಮೂಲ ಸಚಿವರಾದ ರೋಶಿ ಅಗಸ್ಟೀನ್‌ ತಿಳಿಸಿದ್ದಾರೆ.

ಜುಲೈ 31ರಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದಾದ್ಯಂತ ಇದುವರೆಗೆ 19 ಜನರು ಸಾವನ್ನಪ್ಪಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ. ರಾಜ್ಯದ ವಿವಿಧೆಡೆ ಗುರುವಾರ 4ರಿಂದ 11 ಸೆಂ.ಮೀ.ವರೆಗೂ ಮಳೆ ಸುರಿದಿದೆ.