ಮನೆ ರಾಜ್ಯ ಚಾಮರಾಜನಗರ: ಓಮ್ನಿ ಕಾರಿನ ಮೇಲೆ ಬಿದ್ದ ಬೃಹತ್‌ ಆಲದ ಮರ; ತಂದೆ-ಮಗ ಸಾವು

ಚಾಮರಾಜನಗರ: ಓಮ್ನಿ ಕಾರಿನ ಮೇಲೆ ಬಿದ್ದ ಬೃಹತ್‌ ಆಲದ ಮರ; ತಂದೆ-ಮಗ ಸಾವು

0

ಚಾಮರಾಜನಗರ (Chamarajanagar): ಬೃಹತ್‌ ಆಲದ ಮರವೊಂದು ಸಂಚರಿಸುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ಬಿದ್ದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಹೆಗ್ಗವಾಡಿಪುರದ ಗ್ರಾಮದ ಎಚ್‌.ಪಿ.ರಾಜು (49) ಹಾಗೂ ಅವರ ಮಗ ಶರತ್ (15) ಮೃತಪಟ್ಟವರು. ಸಂತೇಮರಹಳ್ಳಿ ಹೋಬಳಿಯ ಕುದೇರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

ಸಂತೇಮರಹಳ್ಳಿಯಲ್ಲಿ ವಾಸವಿದ್ದ ಇವರು, ಸಗಟು ದರದಲ್ಲಿ ಅಂಗಡಿಗಳಿಗೆ ವಸ್ತುಗಳನ್ನು ಪೂರೈಸುತ್ತಿದ್ದರು. ಶುಕ್ರವಾರ ಸಂಜೆ ಆರು ಗಂಟೆ ಸುಮಾರಿಗೆ ಸಂತೇಮರಹಳ್ಳಿಯಿಂದ ಕುದೇರಿನತ್ತ ಓಮ್ನಿಯಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಹೆಗ್ಗವಾಡಿಪುರ ಕೆರೆ ಬಳಿ ಇದ್ದ ಬೃಹತ್‌ ಆಲದ ಮರ ಓಮ್ನಿ ಮೇಲೆ ಬಿದ್ದಿದೆ. ಓಮ್ನಿ ನಜ್ಜುಗುಜ್ಜಾಗಿದ್ದು, ಅದರ ಮಧ್ಯೆ ಸಿಕ್ಕಿಕೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು.

ಬೀಳುವ ಸ್ಥಿತಿಯಲ್ಲಿದ್ದ ಆಲದ ಮರ ಇತ್ತೀಚೆಗೆ ಚಿಗುರೊಡೆದಿತ್ತು. ಆದರೆ ಗಾಳಿ ಮತ್ತು ಮಳೆಯಿಂದಾಗಿ ಮರದ ಬುಡ ದುರ್ಬಲವಾಗಿತ್ತು. ಶುಕ್ರವಾರ ಮಳೆ ಇಲ್ಲದಿದ್ದರೂ, ವೇಗವಾಗಿ ಗಾಳಿ ಬೀಸುತ್ತಿತ್ತು. ಗಾಳಿಯಿಂದಾಗಿ ಮರ ಬಿದ್ದಿದೆ.