ಮಂಗಳೂರು: ನಗರದ ನಂದಿಗುಡ್ಡೆಯ ವಸತಿ ಸಮುಚ್ಚಯವೊಂದರಲ್ಲಿ ಅಪ್ರಾಪ್ತ ಯುವತಿಯರನ್ನು ಬಳಸಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಚೈಲ್ಡ್ ಲೈನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಹಕಾರದೊಂದಿಗೆ ಮಂಗಳೂರು ಪೊಲೀಸರು ಬೇಧಿಸಿದ್ದಾರೆ.
ನಾಲ್ವರು ಸಂತ್ರಸ್ತ ಯುವತಿಯರನ್ನು ರಕ್ಷಿಸಿರುವ ಪೊಲೀಸರು, ಇಬ್ಬರು ಮಹಿಳೆಯರನ್ನು ಹಾಗೂ ಒಬ್ಬಾಕೆ ಆರೋಪಿಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಿಂದಲೇ ಈ ಅಕ್ರಮ ವೇಶ್ಯಾವಾಟಿಕೆ ವ್ಯವಹಾರ ನಡೆಯುತ್ತಿರುವ ಬಗ್ಗೆ ಅನುಮಾನವಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಯುವತಿಯರು ನಗರದ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿಯರಾಗಿದ್ದು, ಅಪ್ರಾಪ್ತ ವಯಸ್ಸಿನವರಾಗಿದ್ದಾರೆ. ಉಳಿದ ಇನ್ನಿಬ್ಬರು ಯುವತಿಯರ ಜತೆ ಸಂಪರ್ಕ ಸಾಧಿಸಿ ಈ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ವೇಶ್ಯಾವಾಟಿಕೆ ನಡೆಯುತ್ತಿದ್ದ ಫ್ಲ್ಯಾಟ್ನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಈ ಅಕ್ರಮ ವ್ಯವಹಾರಗಳಿಗೆ ಪುರಾವೆ ಸಿಕ್ಕಿದೆ. ನಾವು ಕರೆಯುವಾಗ ಇಲ್ಲಿಗೆ ಬಂದು ಗ್ರಾಹಕರಿಗೆ ಸಹಕರಿಸಬೇಕು. ಇಲ್ಲವಾದರೆ ಸಿಸಿ ಕ್ಯಾಮರಾ ಫೂಟೇಜ್ಗಳನ್ನು ಜಾಲತಾಣಗಳಿಗೆ ಅಪ್ ಲೋಡ್ ಮಾಡುತ್ತೇವೆ ಎಂದು ಆರೋಪಿಗಳು ಸಂತ್ರಸ್ತ ಯುವತಿಯರಿಗೆ ಬೆದರಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯೊಬ್ಬಳಿಗೆ ಈ ವೇಶ್ಯಾವಾಟಿಕೆಯಿಂದ ಸಮಸ್ಯೆಯಾಗಿದ್ದು, ಅದನ್ನು ಆಕೆ ತನ್ನ ಸ್ನೇಹಿತೆಗೆ ತಿಳಿಸಿದ್ದಳು. ಸ್ನೇಹಿತೆ ಮೂಲಕ ಈ ಸುದ್ದಿಯ ಮಾಹಿತಿ ಸಂಸ್ಥೆಯ ಪ್ರಿನ್ಸಿಪಾಲ್ಗೆ ಹೋಗಿತ್ತು. ಆ ಬಳಿಕ ಪ್ರಿನ್ಸಿಪಾಲ್ ಚೈಲ್ಡ್ ಲೈನ್ಗೆ ಮಾಹಿತಿ ನೀಡಿದ್ದರು. ಅವರ ಸಹಕಾರದಿಂದ ಅಪ್ರಾಪ್ತ ಸಂತ್ರಸ್ತೆ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.