ಮನೆ ರಾಜ್ಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಅಸ್ತು: ತೀರ್ಪು ಸ್ವಾಗತಿಸಿದ ಸಿ.ಟಿ.ರವಿ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಅಸ್ತು: ತೀರ್ಪು ಸ್ವಾಗತಿಸಿದ ಸಿ.ಟಿ.ರವಿ

0

ಬೆಂಗಳೂರು (Bengaluru): ಚಾಮರಾಜಪೇಟೆಯ ಈದ್ಗಾ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಅಸ್ತು ನೀಡಿದೆ.  ಕೋರ್ಟ್‌ ನ ತೀರ್ಪನ್ನು ಚಾಮರಾಜಪೇಟೆ ನಾಗರಿಕರು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವಾಗತಿಸಿದ್ದಾರೆ.

ನ್ಯಾಯಾಲಯದ ಆದೇಶ ಹೊರಬಿದ್ದದ್ದೇ ತಡ ಚಾಮರಾಜಪೇಟೆ ನಾಗರಿಕ ಒಕ್ಕೂಟ ಹಾಗೂ ಹಿಂದೂ ಪರ ಸಂಘಟನೆಗಳು ಸಂಭ್ರಮಾಚರಣೆ ಮಾಡಿದವು. ಗಣಪತಿ ಬಪ್ಪಾ ಮೋರೆಯಾ.. ಮಂಗಳ ಮೂರ್ತಿ ಮೋರೆಯಾ ಎಂದು ಘೋಷಣೆ ಕೂಗಿ ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿದರು.

ತೀರ್ಪನ್ನು ಸ್ವಾಗತಿಸಿರುವ ಸಿ.ಟಿ.ರವಿ ಅವರು, ಹಿಂದೂಗಳ ಧಾರ್ಮಿಕ ಆಚರಣೆ ಸ್ವಾತಂತ್ರ್ಯ ಯಾರೊಬ್ಬರ ಬಳಿ ಕೇಳಿ ಪಡೆಯುವ ಭಿಕ್ಷೆ ಅಲ್ಲ ಅದು ಜನ್ಮ ಸಿದ್ದ ಹಕ್ಕು ಅನ್ನೋದನ್ನು ಇಂದಿನ ತೀರ್ಪು ಎತ್ತಿ ಹಿಡಿದಿದೆ. ಕಂದಾಯ ಇಲಾಖೆಗೆ ಸೇರಿದ್ದ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಸಮಿತಿಗಳಿಗೆ ಅನುಮತಿ ನೀಡಲು ನಾನು ಈಗಾಗಲೇ ಘನ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕೂಡಾ ಆಗಿತ್ತು. ಇಂದಿನ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಆ ನಿಟ್ಟಿನಲ್ಲೇ ಇದೆ ಎಂದರು.

ಆಟದ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿನ್ನೆ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನಿಂದ ನಿರಾಶರಾಗಿದ್ದ ನಮಗೆ ಇಂದಿನ ತೀರ್ಪು ಮತ್ತೊಮ್ಮೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದೆ ಮತ್ತು ಸಂತಸ ತಂದಿದೆ. ಗಣೇಶೋತ್ಸವ ಆಚರಣೆಯ ಹಿಂದಿನ ಉದ್ದೇಶ ಸಮಾಜದ ಏಕತೆ. ಇದನ್ನು ಅರ್ಥ ಮಾಡಿಕೊಳ್ಳದ ಮತಾಂಧ ಶಕ್ತಿಗಳಿಗೆ ದೇಶ ಭಕ್ತಿಯ ಸದಾಚಾರ, ಸದ್ಬುದ್ಧಿ ಕೊಡಲೆಂದು ವಿಘ್ನ ವಿನಾಶಕನಲ್ಲಿ ಪ್ರಾರ್ಥಿಸೋಣ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ಗುರುವಾರವಷ್ಟೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಮೈದಾನವನ್ನು ಮಕ್ಕಳ ಆಟಕ್ಕೆ ಸೀಮಿತ ಮಾಡುವಂತೆ ಸೂಚನೆ ನೀಡಿದ್ದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ವೇಳೆ ರಾಷ್ಟ್ರ ಧ್ವಜಾರೋಹಣ, ಮುಸ್ಲಿಂ ಹಬ್ಬಗಳ ವೇಳೆ ಪ್ರಾರ್ಥನೆಗೆ ಅವಕಾಶವನ್ನಷ್ಟೇ ನೀಡಲು ಆದೇಶಿಸಿದ್ದರು. ಇದರಿಂದ ಹಿಂದೂ ಪರ ಸಂಘಟನೆಗಳಿಗೆ ಭಾರೀ ಹಿನ್ನಡೆಯಾಗಿತ್ತು. ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಚಾಮರಾಜಪೇಟೆ ನಾಗರಿಕ ಒಕ್ಕೂಟದ ಸದಸ್ಯರು ವಿಭಾಗೀಯ ಪೀಠದ ಮೆಟ್ಟಿಲೇರಿದ್ದರು.