ಯಾದಗಿರಿ(Yadagiri): ಜಿಲ್ಲೆಯ ಶಹಾಪುರ ಠಾಣಾ ವ್ಯಾಪ್ತಿಯ, ವಡಗೇರಾ ತಾಲ್ಲೂಕಿನ ಮದರಕಲ್ ಗ್ರಾಮದ ಹಿರೇಹಳ್ಳದಲ್ಲಿ ಸಿಮೆಂಟ್ ಲಾರಿ ಉರುಳಿ ಬಿದ್ದ ಪರಿಣಾಮ 3 ಟನ್ ಸಿಮೆಂಟ್ ನೀರು ಪಾಲಾಗಿರುವ ಘಟನೆ ಶನಿವಾರ ನಡೆದಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಹಿರೇಹಳ್ಳದಲ್ಲಿ ನೀರು ಹರಿಯುತ್ತಿತ್ತು. ನೀರಿನ ಹರಿವು ಜಾಸ್ತಿ ಇದ್ದರೂ ಚಾಲಕ ಲಾರಿ ಚಲಾಯಿಸಿದ್ದರಿಂದ ಈ ಅನಾಹುತ ಸಂಭವಿಸಿದೆ.
ಲಾರಿಯಲ್ಲಿದ್ದವರು ಟಾಪ್ ಮೇಲೆ ಕುಳಿತು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ನಂತರ ಸಂಬಂಧಿಸಿದವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಿಂದ ಬೆಳಗಾವಿಗೆ ಸಿಮೆಂಟ್ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಗುಡುಗು ಮಿಂಚಿನಿಂದ ಕೂಡಿದ ಧಾರಾಕಾರ ಮಳೆ ಬೆಳಗಿನ ಜಾವದವರೆಗೆ ಮುಂದುವರೆದಿತ್ತು. ಇದರಿಂದ ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದೆ.