ಚಂಡೀಗಡ(Chandighad) : ಹರಿಯಾಣ ಪೊಲೀಸರು ಒಂದೇ ದಿನಲ್ಲಿ ರಾಜ್ಯದ ಹಲವೆಡೆ ದಾಳಿ ನಡೆಸಿ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 950 ಮಂದಿಯನ್ನು ಬಂಧಿಸಿದ್ದು, 710 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಿಜಿಪಿ ಕೆ. ಅಗರ್ವಾಲ್, ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪಾತಕ ಕೃತ್ಯ, ಬೀದಿ ಅಪರಾಧ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದವರ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ನಡೆಸಿದ ಕಾರ್ಯಾಚರಣೆ ಇದಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 3,500 ಪೊಲೀಸರು ಪಾಲ್ಗೊಂಡಿದ್ದರು. 645 ತಂಡಗಳಾಗಿ ವಿಭಜನೆಗೊಂಡು ಹಲವಾರು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಸ್ವಯಂ ಘೋಷಿತ 45 ತಪ್ಪಿತಸ್ಥರನ್ನು ಮತ್ತು ಜಾಮೀನಿನ ಆಧಾರದಲ್ಲಿ ಹೊರಗೆ ಉಳಿದಿದ್ದ 34 ಮಂದಿಯನ್ನು ಬಂಧಿಸಲಾಗಿದೆ.
ಪಾನಿಪತ್ ಜಿಲ್ಲೆಯಲ್ಲಿ 116 ಮಂದಿ, ಗುರುಗ್ರಾಮದಲ್ಲಿ 108 ಹಾಗೂ ಅಂಬಾಲದಲ್ಲಿ 102 ಮಂದಿಯನ್ನು ಬಂಧಿಸಲಾಗಿದೆ.